ಭುವನೇಶ್ವರ(ಒಡಿಶಾ): ತಮಿಳುನಾಡಿನ ರಾಜಧಾನಿ ಚೆನ್ನೈಗೆ ಹೊರಟಿದ್ದ ವಿಮಾನವೊಂದು ಭಾನುವಾರ ಸಂಜೆ ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಪ್ರಯಾಣಿಕನೋರ್ವನಿಗೆ ದಿಢೀರ್ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆ ವಿಮಾನವು ಭುವನೇಶ್ವರ ಏರ್ಪೋರ್ಟ್ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿಮಾನ ನಿಲ್ದಾಣದ ಅಧಿಕೃತ ಮೂಲಗಳು ತಿಳಿಸಿವೆ.
ಏರ್ ಏಷ್ಯಾ IAD 1531 A320 ವಿಮಾನವು ರಾಂಚಿ ವಿಮಾನ ನಿಲ್ದಾಣದಿಂದ ಚೆನ್ನೈ ವಿಮಾನ ನಿಲ್ದಾಣದ ಕಡೆಗೆ ಹಾರಿತ್ತು. ಆದರೆ, ಪ್ರಯಾಣಿಕರೊಬ್ಬರು ತಮಗೆ ಉಂಟಾದ ಅರೋಗ್ಯದಲ್ಲಿನ ಏರು ಪೇರಿನ ಬಗ್ಗೆ ದೂರು ನೀಡಿದ್ದಾರೆ. ಆಗ ವಿಮಾನವನ್ನು ಭುವನೇಶ್ವರದ ಬಿಪಿಐ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.
ಚೆನ್ನೈಗೆ ತೆರಳುತ್ತಿದ್ದ ಏರ್ ಏಷ್ಯಾ ವಿಮಾನವು ರಾತ್ರಿ 7.26ಕ್ಕೆ ಭುವನೇಶ್ವರದ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ವಿಮಾನ ನಿಲ್ದಾಣದ ಅಧಿಕೃತ ಮೂಲಗಳು ತಿಳಿಸಿವೆ.
ರೋಗಿ ಗಂಭೀರ ಸ್ಥಿತಿಯಲ್ಲಿದ್ದು, ಭುವನೇಶ್ವರದ ಕ್ಯಾಪಿಟಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.