ಚೆನ್ನೈ(ತಮಿಳುನಾಡು):ಶ್ರಮಪಟ್ಟು ಕೆಲಸ ಮಾಡುವ ಸಿಬ್ಬಂದಿಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ನೀಡಲು ಕೆಲವು ಕಂಪನಿಗಳು ಹೆಣಗಾಡುತ್ತವೆ. ಇದರ ಮಧ್ಯೆ, ಚೆನ್ನೈನಲ್ಲಿರುವ ಕಂಪನಿಯೊಂದು ತನ್ನಲ್ಲಿ ಕೆಲಸ ಮಾಡುತ್ತಿರುವ 100 ಸಿಬ್ಬಂದಿಗೆ ಕಾರುಗಳನ್ನೇ ಉಡುಗೊರೆಯಾಗಿ ಕೊಟ್ಟು ಗಮನ ಸೆಳೆದಿದೆ. ಐಡಿಯಾಸ್2ಐಟಿ (Ideas2IT) ಕಳೆದ 10 ವರ್ಷಗಳಿಂದ ತನ್ನ ಕಚೇರಿಯಲ್ಲಿ ಕೆಲಸ ಮಾಡ್ತಿರುವ ಸಿಬ್ಬಂದಿಗೆ ಮಾರುತಿ ಸುಜುಕಿ ಕಾರು ಗಿಫ್ಟ್ ನೀಡಿದೆ.
100 ಉದ್ಯೋಗಿಗಳಿಗೆ ಕಾರು ಗಿಫ್ಟ್ ನೀಡಿದ ಚೆನ್ನೈ ಮೂಲದ ಐಟಿ ಕಂಪನಿ
ಕಳೆದ ಕೆಲ ವರ್ಷಗಳಿಂದ ಪರಿಶ್ರಮಪಟ್ಟು ಕೆಲಸ ಮಾಡಿದ್ದಕ್ಕಾಗಿ 100 ಉದ್ಯೋಗಿಗಳಿಗೆ ಕಂಪನಿಯೊಂದು ಭರ್ಜರಿ ಉಡುಗೊರೆ ನೀಡಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕಂಪನಿಯ ಸಂಸ್ಥಾಪಕ ಮುಖ್ಯಸ್ಥ ಮುರಳಿ ವಿವೇಕಾನಂದನ್, 'ಕಂಪನಿಯ ಲಾಭಾಂಶ ಹಂಚಿಕೆ ಅಂಗವಾಗಿ ಕಾರು ಉಡುಗೊರೆಯಾಗಿ ನೀಡಲಾಗಿದೆ. ಕಂಪನಿಯ ಸುಧಾರಣೆ, ಬೆಳವಣಿಗಾಗಿ ಉದ್ಯೋಗಿಗಳು ಬೆಂಬಲ ನೀಡಿದ್ದು, ಪರಿಶ್ರಮದಿಂದ ಕೆಲಸವನ್ನೂ ನಿರ್ವಹಿಸಿದ್ದಾರೆ. ಇದೀಗ ಆದಾಯದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ತಿಳಿಸಿದರು.
'ಕಳೆದ ಕೆಲ ವರ್ಷಗಳ ಹಿಂದೆ ನಾವು ಅಂದುಕೊಂಡಿದ್ದಷ್ಟು ಗುರಿ ಸಾಧಿಸಿದಾಗ ಕಂಪನಿ ಲಾಭಾಂಶವನ್ನು ಉದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದಾಗಿ ಭರವಸೆ ನೀಡಿದ್ದೆವು. ಇದೀಗ ಕಾರುಗಳ ರೂಪದಲ್ಲಿ ಉಡುಗೊರೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಲಾಭಾಂಶವನ್ನು ಉದ್ಯೋಗಿಗಳ ಜೊತೆ ಹಂಚಿಕೊಳ್ಳುವ ಭರವಸೆ ನೀಡುತ್ತೇವೆ' ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ, ಚೆನ್ನೈ ಮೂಲದ ಸಾಫ್ಟ್ವೇರ್ ಆಸ್-ಎ-ಸರ್ವೀಸ್ ಕಂಪನಿ(SaaS) ಕಿಸ್ಫ್ಲೋ ತನ್ನ ಕಂಪನಿಯ ಐವರಿಗೆ ಬಿಎಂಡಬ್ಲೂ ಕಾರು ಉಡುಗೊರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.