ರಾಯಪುರ (ಛತ್ತೀಸ್ಗಢ): ಅಪರೂಪದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಛತ್ತೀಸ್ಗಢದ ರಾಜಧಾನಿ ರಾಯಪುರ ವೈದ್ಯರು 27 ವರ್ಷದ ಮಹಿಳೆಯ ಜೀವ ಉಳಿಸಿದ್ದಾರೆ. ಮಹಿಳೆಯ ಹೃದಯವನ್ನು ಪ್ರವೇಶಿಸಿದ್ದ ಕಿಮೊಥೆರಪಿ ಸಾಧನವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಜಶ್‌ಪುರ ನಿವಾಸಿ 27 ವರ್ಷದ ಮಹಿಳೆ ಹೊಟ್ಟೆಯ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಕಿಮೊ ಪೋರ್ಟ್ ಮೂಲಕ ವೈದ್ಯರು ಔಷಧ ನೀಡುತ್ತಿದ್ದರು. ಹೀಗೆ ಔಷಧ ನೀಡುವ ಪ್ರಕ್ರಿಯೆ ವೇಳೆ ವೈದ್ಯರು ಎಕ್ಸ್ರೇ ಸಹ ಮಾಡಿದ್ದಾರೆ. ಆಗ ಹೃದಯದೊಳಗೆ ಕಿಮೋಥೆರಪಿ ಸಾಧನವು ಪ್ರವೇಶಿಸಿರುವುದು ಕಂಡುಬಂದಿದೆ.
ಆದ್ದರಿಂದ ವೈದ್ಯರು ತಕ್ಷಣವೇ ರೋಗಿಯನ್ನು ಡಾ.ಭೀಮ್ ರಾವ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆ (ಮೆಕಹರಾ)ಗೆ ರೆಫರ್ ಮಾಡಿದ್ದಾರೆ. ಅಂತೆಯೇ, ಕುಟುಂಬಸ್ಥರು ಮಹಿಳೆಯನ್ನು ಅಡ್ವಾನ್ಸ್ಡ್ ಕಾರ್ಡಿಯಾಕ್ ಇನ್ಸ್ಟಿಟ್ಯೂಟ್ (ಎಸಿಐ)ನ ಹೃದ್ರೋಗ ವಿಭಾಗದ ಮುಖ್ಯಸ್ಥರಾದ ಡಾ.ಸ್ಮಿತ್ ಶ್ರೀವಾಸ್ತವ ಅವರ ಬಳಿಗೆ ಕರೆ ತಂದಿದ್ದಾರೆ. ಆಗ ರೋಗಿಯನ್ನು ತಪಾಸಣೆ ನಡೆಸಿದ ಡಾ.ಸ್ಮಿತ್ ಶ್ರೀವಾಸ್ತವ ಮತ್ತವರ ತಂಡವು ಕ್ಯಾಥ್ ಲ್ಯಾಬ್ ಮೂಲಕ ಕಿಮೊ ಪೋರ್ಟ್ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಸದ್ಯ ರೋಗಿಯನ್ನು ಎಸಿಐನ ಹೃದ್ರೋಗ ವಿಭಾಗಕ್ಕೆ ದಾಖಲಿಸಲಾಗಿದೆ.