ಭೋಪಾಲ್ (ಮಧ್ಯಪ್ರದೇಶ): ದೇಶದಲ್ಲಿ ದಶಕಗಳಿಂದ ಮರೆಯಾದ ಚೀತಾ ಸಂತತಿ ಬೆಳೆಸುವ ನಿಟ್ಟಿನಲ್ಲಿ ಕಳೆದ 2022ರ ಸೆಪ್ಟೆಂಬರ್ 17ರಂದು ನಮೀಬಿಯಾದಿಂದ ಎಂಟು ಚೀತಾಗಳನ್ನು ಕರೆತರಲಾಗಿದೆ. ಇದೀಗ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ಕರೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕಳೆದ ವಾರ ಭಾರತ ಮತ್ತು ಪ್ರಿಟೋರಿಯಾ (ದಕ್ಷಿಣ ಆಫ್ರಿಕಾದ ಆಡಳಿತ ರಾಜಧಾನಿ) ನಡುವೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲಾಗಿದೆ ಎಂದು ಭಾರತದ ಚೀತಾ ಪುನರುಜ್ಜೀವನ ಯೋಜನೆಯ ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ:70 ವರ್ಷಗಳ ಬಳಿಕ ಬಂದ ಅತಿಥಿಗಳು: ಪ್ರಾಜೆಕ್ಟ್ ಚೀತಾದಲ್ಲಿ ಕನ್ನಡಿಗ ಅರಿವಳಿಕೆ ತಜ್ಞ
ಕಳೆದ ವರ್ಷ ನಮೀಬಿಯಾದಿಂದ ಕರೆ ತರಲಾದ ಎಂಟು ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಎನ್‌ಪಿ) ಇರಿಸಲಾಗಿದೆ. ಈಗ ತಿಂಗಳುಗಳ ವಿಳಂಬದ ನಂತರ ದಕ್ಷಿಣ ಆಫ್ರಿಕಾದಿಂದ ಒಂದು ಡಜನ್ ಚಿರತೆಗಳು ಅಂತಿಮವಾಗಿ ಮುಂದಿನ ತಿಂಗಳು ಭಾರತಕ್ಕೆ ಬರುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾ ಈ ಚೀತಾಗಳನ್ನು ಭಾರತಕ್ಕೆ ದಾನ ಮಾಡಿದೆ. ಆದರೆ, ಭಾರತವು ಪ್ರತಿ ಚಿರತೆಯನ್ನು ಸ್ಥಳಾಂತರಿಸುವ ಮುನ್ನ ಅವುಗಳನ್ನು ಸೆರೆಹಿಡಿದ ವೆಚ್ಚವಾಗಿ ಮೂರು ಸಾವಿರ ಡಾಲರ್ಗಳನ್ನು ಆಫ್ರಿಕನ್ ರಾಷ್ಟ್ರಕ್ಕೆ ಪಾವತಿಸಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಈ ಬಗ್ಗೆ ಕುನೊ ರಾಷ್ಟ್ರೀಯ ಉದ್ಯಾನವನ ನಿರ್ದೇಶಕ ಉತ್ತಮ್ ಶರ್ಮಾ ಸುದ್ದಿಗಾರರೊಂದಿಗೆ ಮಾತನಾಡಿ, ನಾವು 12 ದಕ್ಷಿಣ ಆಫ್ರಿಕಾದ ಚೀತಾಗಳ ಆಗಮನಕ್ಕಾಗಿ ಕಾಯುತ್ತಿದ್ದೇವೆ. ಈಗಾಗಲೇ ಅವುಗಳಿಗಾಗಿ 10 ಕ್ವಾರಂಟೈನ್ಗಳನ್ನು ಸ್ಥಾಪಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಮಧ್ಯಪ್ರದೇಶದ ಅರಣ್ಯ ಇಲಾಖೆಯ ಮತ್ತೊಬ್ಬ ಅಧಿಕಾರಿ ಮಾತನಾಡಿ, ಭಾರತದೊಂದಿಗೆ ಚೀತಾಗಳ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅವುಗಳನ್ನು ಸ್ಥಳಾಂತರಕ್ಕೆ ದಕ್ಷಿಣ ಆಫ್ರಿಕಾ ಆದೇಶ ಹೊರಡಿಸಿದೆ ಎಂಬ ಮಾಹಿತಿಯ ಲಭ್ಯವಾಗಿದೆ ಎಂದು ಹೇಳಿದ್ದಾರೆ.
ಏಳು ಗಂಡು ಮತ್ತು ಐದು ಹೆಣ್ಣು ಚೀತಾಗಳು: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಕರೆ ತರುತ್ತಿರುವ 12 ಚೀತಾಗಳ ಪೈಕಿ ಏಳು ಗಂಡು ಮತ್ತು ಐದು ಹೆಣ್ಣು ಚೀತಾಗಳು ಸೇರಿವೆ. ದಕ್ಷಿಣ ಆಫ್ರಿಕಾದಲ್ಲಿ ಜುಲೈ 15ರಿಂದಲೇ ಈ ಚೀತಾಗಳನ್ನು ಸೆರೆಹಿಡಿದು ಬೋನ್ನಲ್ಲಿ ಇರಿಸಲಾಗಿದೆ. ಮೂರು ಚೀತಾಗಳನ್ನು ಕ್ವಾಜುಲು ನಟಾಲ್ ಪ್ರಾಂತ್ಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇತರ ಒಂಬತ್ತು ಚೀತಾಗಳನ್ನು ಲಿಂಪೊಪೊ ಪ್ರಾಂತ್ಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಜ್ಞರು ವಿವರಿಸಿದ್ದಾರೆ.