ಭೋಪಾಲ್ : ಆಫ್ರಿಕಾದಿಂದ ತರಲಾಗಿದ್ದ ಚೀತಾಗಳಲ್ಲಿ ಒಂದಾದ ಉದಯ್ ಇತ್ತೀಚಿಗೆ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸಾವನ್ನಪ್ಪಿತ್ತು. ಈ ಸಾವು ಅನೇಕ ಚರ್ಚೆಗೂ ಕಾರಣವಾಗಿತ್ತು. ಚೀತಾ ಈ ಹವಾಗುಣಕ್ಕೆ ಹೊಂದಿಕೊಳ್ಳಲಿಲ್ಲ ಎಂಬ ಮಾತು ಕೇಳಿ ಬಂದಿತ್ತು.
ಈ ನಡುವೆ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿಯಲ್ಲಿ ಚೀತಾ ಸಾವಿಗೆ ಮೂತ್ರಪಿಂಡ ಸೋಂಕು ಕೂಡ ಒಂದು ಕಾರಣ ಎಂದು ಮೂಲಗಳು ತಿಳಿಸಿವೆ. ಚೀತಾದ ಒಳಾಂಗಗಳು ಮತ್ತು ರಕ್ತದ ಮಾದರಿಯನ್ನು ಪರೀಕ್ಷೆ ನಡೆಸಲಾಗಿದ್ದು, ವೈರಸ್ ಸೋಂಕು ಮತ್ತು ಬ್ಯಾಕ್ಟೀರಿಯಾ ಮಿಶ್ರಣ ಕೂಡ ಕಾರಣವಾಗಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಆದಾಗ್ಯೂ ಇದು ಸಂಪೂರ್ಣ ವಿವರವಾದ ವರದಿ ಅಲ್ಲ. ಮಾದರಿಗಳ ಮೆಟಾ-ಜೆನೊಮಿಕ್ ಸಿಕ್ವೆನ್ಸಿಕ್ ಪರೀಕ್ಷೆ ನಡೆಸಿ, ನಿರ್ಧರಿಸಬೇಕಿದೆ ಎಂದು ತಿಳಿಸಲಾಗಿದೆ.
ಆರಂಭದ ವರದಿ: ಹಿಸ್ಟೊಪಾಥಕಾಜಿಕಲ್ ತನಿಖೆಯನ್ನು ಕೂಡಾ ನಡೆಸಲಾಗಿದೆ. ಇದರಲ್ಲಿ ಕೂಡ ಚೀತಾ ಸಾವಿಗೆ ಸೋಂಕು ಕಾರಣವಲ್ಲ ಎಂದು ತಿಳಿಸಿದೆ. ಇವರ ವರದಿ ಇನ್ನೆರಡು ವಾರದಲ್ಲಿ ಬರಲಿದೆ. ಏಪ್ರಿಲ್ 23ರಂದು ಚೀತಾ ಸಾವನ್ನಪ್ಪಿದಾಗ ಪ್ರಾರಂಭದಲ್ಲಿ ಹೃದ್ರೋಗ ಸಮಸ್ಯೆ ಎಂದು ತಿಳಿಸಲಾಗಿತ್ತು.
ಆರು ವರ್ಷದ ಚೀತಾ ಸಾವಿನ ಕುರಿತು ಮಾತನಾಡಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್. ಚೌಹಣ್, ಭಾರತಕ್ಕೆ ಚೀತಾವನ್ನು ಕರೆ ತರುವಾಗ ಮಾಡಿದ ರಕ್ತದ ಪರೀಕ್ಷೆಯಲ್ಲಿ ಯಾವುದೇ ಸೋಂಕು ಪತ್ತೆಯಾಗಿರಲಿಲ್ಲ. ಮಾರ್ಚ್ 27ರಂದು ನಮಿಬಿಯಾದಿಂದ ಕುನೊಗೆ ತಂದ ಚೀತಾಗಳು ಮೂತ್ರಪಿಂಡದ ವೈಫಲ್ಯದಿಂದ ಸಾವನ್ನಪ್ಪಿದೆ ಎಂದಿದ್ದಾರೆ. ಇದಕ್ಕೂ ಮುನ್ನ ಸಾಶಾ ಎಂಬ ಮತ್ತೊಂದು ಚೀತಾ ಕೂಡ ಸಾವನ್ನಪ್ಪಿತ್ತು.
ಈ ಹೆಣ್ಣು ಚೀತಾ ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿತ್ತು. ಇದಾದ ಕೆಲವು ದಿನದ ಬಳಿಕ, ಚೀತಾವನ್ನು ಪ್ರತ್ಯೇಕವಾಗಿಡಲಾಗಿತ್ತು. ರಕ್ತದ ಮಾದರಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ವೇಳೆ ಕಿಡ್ನಿ ಸೋಂಕು ಪತ್ತೆಯಾಗಿತ್ತು. ಬಳಿಕ ಚೀತಾ ಸಾವನ್ನಪ್ಪಿದೆ. ಆದಾಗ್ಯೂ ಅಧಿಕಾರಿಗಳು ವರದಿಯಲ್ಲಿ ಚೀತಾ ಬರುವುದಕ್ಕೆ ಮುಂಚೆಯೇ ನಡೆಸಿದ ರಕ್ತ ಮಾದರಿ ಪರೀಕ್ಷೆ ಸೋಂಕಿಗೆ ತುತ್ತಾಗಿತ್ತು ಎಂದು ತಿಳಿಸಿದ್ದಾರೆ.
ಆಫ್ರಿಕಾದಿಂದ ಬಂದಿದ್ದ ಚೀತಾಗಳು: 1952 ಭಾರತದಲ್ಲಿ ಈ ಸಂತತಿಯ ಚೀತಾಗಳು ನಾಶವಾಗಿದ್ದವು. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಚೀತಾವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಆಫ್ರಿಕಾದ ನಮಿಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಈ ಚೀತಾಗಳನ್ನು ಕರೆತರಲಾಗಿತ್ತು. ಎರಡು ಬ್ಯಾಚ್ನಲ್ಲಿ ಚೀತಾಗಳು ಭಾರತಕ್ಕೆ ಬಂದಿದ್ದವು. ಮೊದಲ ಬ್ಯಾಚ್ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದಂದು ಅಂದರೆ ಸೆಪ್ಟೆಂಬರ್ 17ರಂದು ಕರೆ ತರಲಾಗಿತ್ತು. ಈ ಬ್ಯಾಚ್ನಲ್ಲಿ ಒಟ್ಟು 8 ಚೀತಾಗಳು ಬಂದಿದ್ದವು. ಉಳಿದ 12 ಚೀತಾಗಳನ್ನು ಫೆಬ್ರವರಿಯಲ್ಲಿ ಎರಡನೇ ತಂಡದಲ್ಲಿ ಕರೆ ತರಲಾಗಿತ್ತು.
ಇದನ್ನೂ ಓದಿ: ಮೋಚಾ ಚಂಡಮಾರುತ ಎಫೆಕ್ಟ್: ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ..