ಶಿಯೋಪುರ,ಮಧ್ಯಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನವನದ ತೆರೆದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡಿದ್ದ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದ ಚೀತಾಗಳ ನಡುವೆ ಕಾದಾಟ ನಡೆದಿದೆ. ತೆರೆದ ಕುನೋ ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಚೀತಾಗಳ ಎರಡು ಗುಂಪಿನ ನಡುವೆ ಸಂಘರ್ಷ ನಡೆದಿದ್ದು, ಪರಿಣಾಮ ಆಫ್ರಿಕನ್ ಗಂಡು ಚೀತಾ ಅಗ್ನಿ ಗಾಯಗೊಂಡಿದೆ.
"ಸೋಮವಾರ ಸಂಜೆ ಕುನೋ ರಾಷ್ಟ್ರೀಯ ಉದ್ಯಾನವನದ ತೆರೆದ ಅರಣ್ಯ ಪ್ರದೇಶದಲ್ಲಿ ಎರಡು ಗುಂಪಿನ ಚೀತಾಗಳ ನಡುವೆ ಘರ್ಷಣೆ ನಡೆದ ಬಳಿಕ ಅಗ್ನಿ ಎಂಬ ಗಂಡು ಚೀತಾಗೆ ಗಾಯಗೊಂಡಿದೆ. ಗಾಯಗೊಂಡ ಅಗ್ನಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಸದ್ಯಕ್ಕೆ ಅದರ ಸ್ಥಿತಿ ಸುಧಾರಿಸಿದೆ" ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಗಾಯಗೊಂಡ ಸ್ಥಿತಿಯಲ್ಲಿದ್ದ ಅಗ್ನಿಯನ್ನು ಚೀತಾ ನಿಗಾ ತಂಡದ ಮಂದಿ ಮೊದಲು ನೋಡಿದ್ದು, ತಕ್ಷಣ ಕುನೋ ಆಡಳಿತ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ ತಜ್ಞರೊಂದಿಗೆ ಸ್ಥಳಕ್ಕಾಮಿಸಿದ ಸಿಬ್ಬಂದಿ, ಚಿಕಿತ್ಸೆಗಾಗಿ ಕುನೋದಲ್ಲಿನ ಆಸ್ಪತ್ರೆಗೆ ಕರೆತರಲಾಯಿತು. ಚಿಕಿತ್ಸೆ ಬಳಿಕ ಅಗ್ನಿ ಸ್ಥಿತಿ ಸುಧಾರಿಸುತ್ತಿದೆ.
ಕುನೋದಲ್ಲಿ ನಡೆಯುತ್ತಿರುವ ಚೀತಾಗಳ ಕಾದಾಟ ಅಧಿಕಾರಿಗಳಲ್ಲಿ ಕಳವಳವನ್ನು ಉಂಟು ಮಾಡಿದೆ. ನಮೀಬಿಯಾದಿಂದ ತಂದ ಗೌರವ್ ಮತ್ತು ಶೌರ್ಯ ಹಾಗೂ ದಕ್ಷಿಣ ಆಫ್ರಿಕಾದಿಂದ ತಂದ ವಾಯು ಮತ್ತು ಅಗ್ನಿ ತೆರೆದ ಕಾಡಿನಲ್ಲಿ ತಿರುಗಾಡುತ್ತಿವೆ. ಮಂಗಳವಾರ ಬೆಳಗ್ಗೆ ನಮೀಬಿಯಾದ ಶೌರ್ಯ ಮತ್ತು ದಕ್ಷಿಣ ಆಫ್ರಿಕಾದ ಅಗ್ನಿ ನಡುವೆ ಪರಸ್ಪರ ಕಾದಾಟ ನಡೆದಿದೆ ಎಂದು ಹೇಳಲಾಗಿದೆ. ಈ ಹೋರಾಟದಲ್ಲಿ ಗಂಡು ಚೀತಾ ಅಗ್ನಿ ಗಾಯಗೊಂಡಿದೆ.
ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾದ ಚೀತಾಗಳನ್ನು ತೆರೆದ ಅರಣ್ಯದಲ್ಲಿ ವಿಹಾರಕ್ಕಾಗಿ ಆವರಣದಿಂದ ಒಂದೊಂದಾಗಿ ಬಿಡಲಾಗುತ್ತಿದೆ. ಒಂದು ದಿನದ ಮೊದಲು, ದಕ್ಷಿಣ ಆಫ್ರಿಕಾದಿಂದ ತರಲಾದ ಹೆಣ್ಣು ಚೀತಾ ವೀರಾವನ್ನು ದೊಡ್ಡ ಆವರಣದಿಂದ ತೆರೆದ ಅರಣ್ಯಕ್ಕೆ ಬಿಡಲಾಗಿತ್ತು. ಈಗಾಗಲೇ ಬಯಲು ಅರಣ್ಯದಲ್ಲಿ ಓಡಾಡುತ್ತಿರುವ ಚೀತಾಗಳ ನಡುವೆ ಯಾವುದೇ ಸಂಘರ್ಷ ಉಂಟಾಗದಂತೆ ಕುನೋ ನಿರ್ವಹಣಾ ಅಧಿಕಾರಿಗಳು ಪಾಲ್ಪುರ್ ವ್ಯಾಪ್ತಿಯ ಕುನೋ ನದಿಯ ಇನ್ನೊಂದು ಬದಿಯಲ್ಲಿ ಹೆಣ್ಣು ಚೀತಾವನ್ನು ಬಿಡುಗಡೆ ಮಾಡಲಾಗಿದೆ.