ಹೈದರಾಬಾದ್:ದಶಕದ ಹಿಂದೆ ಸೌದಿ ರಾಜಕುಮಾರ ಉಡುಗೊರೆಯಾಗಿ ನೀಡಿದ 15 ವರ್ಷದ ಗಂಡು ಚೀತಾ ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಶನಿವಾರ ಹೃದಯಾಘಾತದಿಂದ ಸಾವನ್ನಪ್ಪಿದೆ. ‘ಅಬ್ದುಲ್ಲಾ’ ಹೆಸರಿನ ಚೀತಾ ಮರಣೋತ್ತರ ಪರೀಕ್ಷೆ ನಡೆಸಿದಾಗ ಅದು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾಗಿ ಮೃಗಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೈದರಾಬಾದ್‌ನಲ್ಲಿ 2012 ರಲ್ಲಿ ನಡೆದ CoP11 ಶೃಂಗಸಭೆಯ ವೇಳೆ ಮೃಗಾಲಯಕ್ಕೆ ಭೇಟಿ ನೀಡಿದ್ದ ಸೌದಿಯ ರಾಜಕುಮಾರ ಬಂದರ್ ಬಿನ್ ಸೌದ್ ಬಿನ್ ಮೊಹಮ್ಮದ್ ಅಲ್ ಸೌದ್ ಅವರು ಎರಡು ಆಫ್ರಿಕನ್ ಸಿಂಹಗಳು ಮತ್ತು 2 ಚೀತಾಗಳನ್ನು ಉಡುಗೊರೆ ನೀಡುವುದಾಗಿ ಘೋಷಿಸಿದ್ದರು. ವರ್ಷದ ಬಳಿಕ ಸೌದಿ ಅರೇಬಿಯಾದ ರಾಷ್ಟ್ರೀಯ ವನ್ಯಜೀವಿ ಸಂಶೋಧನಾ ಕೇಂದ್ರದಿಂದ ಪ್ರಾಣಿಗಳನ್ನು ಕರೆತರಲಾಗಿತ್ತು.
7 ವರ್ಷದ ಬಳಿಕ ಅಂದರೆ 2020 ರಲ್ಲಿ ಹೆಣ್ಣು ಚೀತಾ ಹಿಬಾ ತನ್ನ ಎಂಟನೇ ವಯಸ್ಸಿನಲ್ಲಿ ಪ್ಯಾರಾಪ್ಲೆಜಿಯಾ ರೋಗದಿಂದಾಗಿ ಸಾವನ್ನಪ್ಪಿತ್ತು. ಪ್ಯಾರಾಪ್ಲೆಜಿಯಾ ನರ ದೌರ್ಬಲ್ಯದಿಂದ ಕೂಡಿದ ಪಾರ್ಶ್ವವಾಯು ರೋಗದ ವರ್ಗಕ್ಕೆ ಸೇರಿದ್ದಾಗಿದೆ. ದುರ್ಬಲ ಸಂವೇದನೆಯಿಂದ ಹಿಬಾ ಕಣ್ಮರೆಯಾಗಿದ್ದಳು. ಅಂದಿನಿಂದ 'ಅಬ್ದುಲ್ಲಾ' ಒಂಟಿಯಾಗಿದ್ದ.
ಇದೀಗ ಅಬ್ದುಲ್ಲಾ ಚೀತಾ ಕೂಡ ಸಾವಿಗೀಡಾಗಿದ್ದು, ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಚೀತಾಗಳೇ ಇಲ್ಲವಾಗಿವೆ. ಸುಮಾರು 70 ವರ್ಷಗಳ ಹಿಂದೆಯೇ ಭಾರತದಲ್ಲಿ ಚೀತಾಗಳ ಸಂತತಿ ನಿರ್ನಾಮವಾಗಿವೆ ಎಂದು ಘೋಷಿಸಲಾಯಿತು. ಕಳೆದ ವರ್ಷವಷ್ಟೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಮೀಬಿಯಾದಿಂದ ಎಂಟು ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತಂದು ಬಿಟ್ಟಿದೆ. ಈ ಮೂಲಕ ಭಾರತದಲ್ಲಿ ಚೀತಾಗಳನ್ನು ಮತ್ತೆ ಪರಿಚಯಿಸಲಾಗಿದೆ.