ನಾಗಪುರ(ಮಹಾರಾಷ್ಟ್ರ): ಬಾಡಿಗೆ ತಾಯ್ತನದ ಹೆಸರಿನಲ್ಲಿ ನವಜಾತ ಹೆಣ್ಣು ಮಗುವನ್ನು ಸುಮಾರು 7 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ವೈದ್ಯ ಮತ್ತು ಆತನ ಸಹಾಯಕರನ್ನು ಮಹಾರಾಷ್ಟ್ರದ ನಾಗಪುರ ಪೊಲೀಸರು ಬಂಧಿಸಿದ್ದಾರೆ.
ಡಾ.ವಿಲಾಸ್ ಭೋಯರ್, ರಾಹುಲ್ ನಿಮ್ಜೆ ಮತ್ತು ನರೇಶ್ ರಾವುತ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಮಗುವನ್ನು ಕೊಂಡುಕೊಂಡ ವ್ಯಕ್ತಿಗಳಿಗೆ ಮಗು ಬಾಡಿಗೆ ತಾಯ್ತನದ ಮೂಲಕ ಜನಿಸಿದೆ ಎಂದು ವೈದ್ಯರು ಮತ್ತು ಆತನ ಸಹಾಯಕರು ನಂಬಿಸಿದ್ದರು ಎಂದು ತಿಳಿದು ಬಂದಿದೆ.
ಪೊಲೀಸ್ ತಂಡ ಹೈದರಾಬಾದ್‌ಗೆ ತೆರಳಿ ಮಗುವಿನೊಂದಿಗೆ ಮಗುವನ್ನು ಕೊಂಡುಕೊಂಡಿದ್ದ ದಂಪತಿಯನ್ನೂ ವಶಕ್ಕೆ ಪಡೆದಿದೆ ಎಂದು ನಾಗಪುರ ನಗರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಪ್ರೇಮ ಪ್ರಕರಣ.. ಗರ್ಭಪಾತ.. ಬಾಡಿಗೆ ತಾಯ್ತನ:ಈ ಕುರಿತು ತನಿಖೆ ನಡೆಸಿದ ಪೊಲೀಸರು ಕೆಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಪ್ರೇಮ ಪ್ರಕರಣವೊಂದರಲ್ಲಿ ಗರ್ಭಿಣಿಯಾಗಿದ್ದ ಮಹಿಳೆ, ಗರ್ಭಪಾತ ಮಾಡಿಸುವ ಸಲುವಾಗಿ ವೈದ್ಯ ವಿಲಾಸ್ ಭೋಯರ್ನನ್ನು ಸಂಪರ್ಕಿಸಿದ್ದಾಳೆ. ಇದೇ ವೇಳೆ, ಹೈದರಾಬಾದ್ ಮೂಲದ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಲು ಬಯಸಿರುವುದು ವೈದ್ಯರಿಗೆ ಗೊತ್ತಾಗಿದೆ. ನಂತರ ಗರ್ಭಿಣಿ ಮಹಿಳೆಯನ್ನು ಸಂಪರ್ಕಿಸಿದ ಅವರು ಗರ್ಭಪಾತ ಮಾಡಿಸಬಾರದು ಎಂದು ಸೂಚಿಸಿದ್ದಾರೆ. ಮಗುವನ್ನು ಹೆರುವುದಕ್ಕಾಗಿ ಮನವೊಲಿಸಿದ್ದಾರೆ. ಗರ್ಭಿಣಿಗೆ ಸಾಕಷ್ಟು ಹಣವನ್ನೂ ನೀಡಲಾಗಿದೆ.
ಇದನ್ನೂ ಓದಿ:ಸಿನಿಮಾ ನೋಡಲು ತೆರಳುತ್ತಿದ್ದ ಮೂವರು ಬಾಲಕರ ಮೇಲೆ ಹಲ್ಲೆ, ದರೋಡೆ ಯತ್ನ
ನಂತರ ಹೈದರಾಬಾದ್ ಮೂಲದ ದಂಪತಿಯನ್ನು ಸಂಪರ್ಕಿಸಿದ ವೈದ್ಯರು, ಬಾಡಿಗೆ ತಾಯ್ತನಕ್ಕಾಗಿ ಮಹಿಳೆ ಸಿದ್ಧವಾಗಿದ್ದಾರೆ ಎಂದು ಹೇಳಿದ್ದು, ಹೈದರಾಬಾದ್ ದಂಪತಿಯಿಂದ ವೀರ್ಯ ಸಂಗ್ರಹಿಸಿ, ಬಾಡಿಗೆ ತಾಯಿಯ ಗರ್ಭದೊಳಗೆ ಸೇರಿಸಲಾಗಿದೆ ಎಂದು ನಂಬಿಸಿದ್ದಾರೆ. ಈ ವೇಳೆ, ದಂಪತಿಗೆ ಅನುಮಾನ ಬಂದಿರುವುದಿಲ್ಲ. ಜನವರಿ 28ರಂದು ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ನಕಲಿ ದಾಖಲೆಗಳನ್ನು ಕೂಡಾ ವೈದ್ಯ ಸೃಷ್ಟಿ ಮಾಡಿದ್ದಾನೆ. ನಂತರ ಮಗುವನ್ನು ಹೈದರಾಬಾದ್ ಮೂಲದ ದಂಪತಿಗೆ ನೀಡಿದ್ದಾರೆ.
ವ್ಯಕ್ತಿಯೊಬ್ಬರು ಈ ಕುರಿತಂತೆ ದೂರು ನೀಡಿದ್ದು, ಗೌಪ್ಯವಾಗಿ ಈ ಪ್ರಕರಣವನ್ನು ತನಿಖೆ ನಡೆಸಲಾಗಿದೆ. ಸ್ವಲ್ಪ ತನಿಖೆ ನಡೆದ ನಂತರ ಸತ್ಯಾಂಶ ಬಹಿರಂಗವಾಗಿದ್ದು, ಹೈದರಾಬಾದ್‌ಗೆ ತಂಡವೊಂದನ್ನು ಕಳಿಸಿ, ದಂಪತಿ ಮತ್ತು ಮಗುವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.