ಉಜ್ಜೈನಿ(ಮಧ್ಯಪ್ರದೇಶ): ವಿಶ್ವವಿಖ್ಯಾತ ಬಾಬಾ ಮಹಾಕಾಲ್ ಜ್ಯೋತಿರ್ಲಿಂಗ ದೇವಾಲಯದ ವಿಸ್ತರಣೆ ಕಾರ್ಯ ಭರದಿಂದ ಸಾಗಿದೆ. ಜೂನ್ 15 ಮತ್ತು 16ರಂದು ಪ್ರಧಾನಿ ನರೇಂದ್ರ ಮೋದಿ ಉಜ್ಜೈನಿಗೆ ತಲುಪಿ, ಮೊದಲ ಹಂತದ ವಿಸ್ತರಣಾ ಕಾಮಗಾರಿಗೆ ಹಸಿರು ನಿಶಾನೆ ತೋರುವ ಸಾಧ್ಯತೆ ಇದೆ. ಆದರೆ, ಈಗ ಕೆಲವು ಪುಂಡರು ದೇಗುಲದ ಹೆಸರಿನಲ್ಲಿ ಹಣ ಪಡೆದು ವಂಚಿಸುತ್ತಿದ್ದಾರೆ. ದೇವಸ್ಥಾನದ ಅರ್ಚಕರೆಂದು ಹೇಳಿಕೊಂಡು ನಾಗರಿಕರು, ವ್ಯಾಪಾರಿಗಳಿಗೆ ಕರೆ ಮಾಡಿ ಅದೇ ಮೊಬೈಲ್ ಸಂಖ್ಯೆಗೆ ಹಣ ಪಾವತಿಸುವಂತೆ ಬೇಡಿಕೆ ಇಡುತ್ತಿದ್ದಾರೆ. ಈ ಕುರಿತಂತೆ ಎರಡು ಪ್ರಕರಣಗಳು ನಡೆದಿವೆ.
ಏಪ್ರಿಲ್ 26ರಂದು ಪ್ರಾಂಜಲ ಟ್ರೇಡರ್ಸ್ ಹೆಸರಿನಲ್ಲಿ ವ್ಯಾಪಾರ ಮಾಡುವ ದಿನಸಿ ವ್ಯಾಪಾರಿ ಪ್ರಭಾತ್ ಬನ್ಸಾಲ್ ಎಂಬಾತನಿಗೆ ದೇಗುಲದ ಹಿರಿಯ ಆಶೀಶ್ ಪೂಜಾರಿ ಎಂದು ಹೇಳಿಕೊಂಡು ಪುಂಡರು 8889881212 ನಂಬರ್ನಿಂದ ಕರೆ ಮಾಡಿದ್ದರು. 'ಪ್ರಧಾನಿ ಮೋದಿ ಅವರು ಆಗಮಿಸುತ್ತಿದ್ದು, ಈ ವೇಳೆ ದೇವಸ್ಥಾನ ಸಮಿತಿಯಿಂದ ಕಾರ್ಯಕ್ರಮ ಮಾಡಲಾಗುತ್ತದೆ. ಆದ್ದರಿಂದ ಲಡ್ಡು ಪ್ರಸಾದ ಸಾಮಗ್ರಿಗಳನ್ನು ಖರೀದಿಸಬೇಕಾಗಿದೆ, ಪ್ರಸ್ತುತ ಟೆಂಡರ್ ಆಗಿಲ್ಲ. ಆನ್ಲೈನ್ ಬಿಡ್ಡಿಂಗ್ ನಡೆಯಲಿದ್ದು, ಅದರಲ್ಲಿ ನೀವು ಭಾಗವಹಿಸಿ' ಎಂದು ಪುಂಡರು ಹೇಳಿದ್ದರು.
ನಂತರ ವ್ಯಾಪಾರಿ ಬಳಿ ದಾಖಲಾತಿಗಳನ್ನು ಕೇಳಿದ ಪುಂಡರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹೆಸರಿನಲ್ಲಿ ಪೇಪರ್‌ಗಳನ್ನು ನೀಡಿದ್ದರು. ನಂತರ ವ್ಯಾಪಾರಿಯಿಂದ 85 ಸಾವಿರ ರೂಪಾಯಿ ಆನ್ಲೈನ್ನಲ್ಲಿ ಪಾವತಿ ಮಾಡಬೇಕೆಂದು ಕೇಳಿದ್ದಾರೆ. ಈ ವೇಳೆ, ವ್ಯಾಪಾರಿ ಕ್ಯೂಆರ್ ಕೋಡ್ ಮೂಲಕ 1 ರೂಪಾಯಿ ಪಾವತಿಸಿದ್ದು, ನಂತರ ಆತನಿಗೆ ಅನುಮಾನ ಆರಂಭವಾಗಿದೆ. ನಂತರ ದೇವಾಲಯದ ಆಡಳಿತ ಮಂಡಳಿ ಖುದ್ದಾಗಿ ಭೇಟಿಯಾಗಿ ಚರ್ಚಿಸಿದಾಗ ಇಂತಹ ಯಾವುದೇ ರೀತಿಯ ಹಣಕ್ಕೆ ದೇವಾಲಯ ಬೇಡಿಕೆ ಇಟ್ಟಿಲ್ಲ ಎಂದು ತಿಳಿದು ಬಂದಿದೆ. ನಂತರ ಇಂತಹ ಕರೆಗಳಿಗನ್ನು ನಿರ್ಲಕ್ಷಿಸುವಂತೆ ವ್ಯಾಪಾರಿಗೆ ದೇವಾಲಯ ಆಡಳಿತ ಮಂಡಳಿ ಸಲಹೆ ನೀಡಿದೆ.
ಮತ್ತೊಂದು ಪ್ರಕರಣದಲ್ಲಿ ಇಂದೋರ್‌ನ ಎಸಿ ಮಾರಾಟಗಾರ ತುಷಾರ್ ಮಹೇಶ್ವರಿ ಅವರಿಗೆ ಫೋನ್ ಮಾಡಿದ್ದ ಪುಂಡರು ತಾವು ದೇವಾಲಯದ ಸಮಿತಿಯವರು ಎಂದು ಹೇಳಿಕೊಂಡಿದ್ದಾರೆ. ಆಶೀಶ್ ಪೂಜಾರಿ ಎಂದು ಹೇಳಿಕೊಂಡಿರುವ ಅವರು 142 ವಸ್ತುಗಳನ್ನು ಖರೀದಿಸುವುದಾಗಿಯೂ, ಅದಕ್ಕಾಗಿ ಆನ್ಲೈನ್ ಬಿಡ್ಡಿಂಗ್ ನಡೆಯುವುದಾಗಿಯೂ ಹೇಳಿಕೊಂಡಿದ್ದಾರೆ. ದೇವಸ್ಥಾನ ಸಮಿತಿ ಹೆಸರಿನಲ್ಲಿ ನಕಲಿ ಪತ್ರ ತೋರಿಸಿ ಆನ್ಲೈನ್ ಬಿಡ್ಡಿಂಗ್ ಮೂಲಕ ಹಣಕ್ಕಾಗಿ ಬೇಡಿಕೆ ಇಡಲಾಗಿದೆ ಎಂದು ತಿಳಿದು ಬಂದಿದೆ. ಈ ಎರಡು ಪ್ರಕರಣಗಳು ಗೊತ್ತಾದಾಗ ದೇವಸ್ಥಾನ ಸಮಿತಿಯ ಆಡಳಿತಾಧಿಕಾರಿ ಗಣೇಶ್ ಕುಮಾರ್ ಢಾಕಡ್ ಮಹಾಕಾಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಪ್ರೇಮಿಗಳ ಮೇಲೆ ಗ್ರಾಮಸ್ಥರಿಂದ ಅಮಾನವೀಯ ರೀತಿಯಲ್ಲಿ ಥಳಿತ: ವಿಡಿಯೋ ವೈರಲ್