ಕರ್ನಾಟಕ

karnataka

ETV Bharat / bharat

TOEFL/ GRE ಪರೀಕ್ಷೆಯಲ್ಲಿ ವಂಚನೆ: ನಾಲ್ವರ ಬಂಧನ - GRE ಪರೀಕ್ಷೆಯಲ್ಲಿ ವಂಚನೆ

TOEFL/ GRE ಪರೀಕ್ಷೆಗಳಲ್ಲಿ ವಂಚನೆ ಎಸಗಿದ ಆರೋಪದ ಮೇಲೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಹೆಚ್ಚಿನ ಅಂಕ ಪಡೆಯುವ ಆಮಿಷ ಒಡ್ಡಿ ಈ ಆರೋಪಿಗಳು ವಿದ್ಯಾರ್ಥಿಗಳಿಂದ 20 ಸಾವಿರ ರೂಪಾಯಿ ಪಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

cheating-in-toefl-gre-exam-four-arrested
cheating-in-toefl-gre-exam-four-arrested

By

Published : Feb 8, 2023, 3:38 PM IST

ಹೈದರಾಬಾದ್: ಸುಲಭವಾಗಿ ಹಣ ಗಳಿಸಲು ವಂಚನೆಯ ಮಾರ್ಗ ಹಿಡಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕೊನೆಗೆ ಪೊಲೀಸರ ಬಲೆಗೆ ಬಿದ್ದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. TOEFL/ GRE ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಕೊಡಿಸುತ್ತೇವೆಂದು ಹೇಳಿಕೊಂಡು ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದ ನಾಲ್ವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ನಗರದ ಬಶೀರಬಾಗ್​ನಲ್ಲಿರುವ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಸಿಟಿ ಸಿಎಸ್​ಎಸ್ ಜಂಟಿ ಪೊಲೀಸ್ ಕಮಿಶನರ್ ಡಾ ಗಜರಾವ್ ಭೂಪಾಲ್ ಮತ್ತು ಸೈಬರ್ ಕ್ರೈಂ ಡಿಸಿಪಿ ಸ್ನೇಹಾ ಮೆಹ್ರಾ ಈ ಬಗ್ಗೆ ಮಾಹಿತಿ ನೀಡಿದರು.

ಹೈದರಾಬಾದ್ ವಾಸಿಗಳಾದ ಗಲ್ಜ್ ಆದಿತ್ಯ, ಎಂ. ಶ್ರವಣ್ ಕುಮಾರ್, ಎಂ. ಸೇಸಂತೋಷ್, ಪಿ. ಕಿಶೋರ್, ಎ. ಕಿರಣ್‌ಕುಮಾರ್ ಮತ್ತು ಗುಣಶೇಖರ್ ಇವರೆಲ್ಲರೂ ಗೆಳೆಯರು. ಇವರಲ್ಲಿ ಶ್ರವಣ್ ಕುಮಾರ್ ಮತ್ತು ಆದಿತ್ಯ ರಾಯ್‌ಪುರದ ಎನ್‌ಐಟಿಯಲ್ಲಿ ಅಂತಿಮ ವರ್ಷದ ಬಿಟೆಕ್ ಓದುತ್ತಿದ್ದಾರೆ. ಇಬ್ಬರೂ ತಂತ್ರಜ್ಞಾನ ವಿಷಯದಲ್ಲಿ ಬುದ್ಧಿವಂತರಾಗಿದ್ದಾರೆ ಮತ್ತು GRE / TOEFL ಪರೀಕ್ಷೆಗಳನ್ನು ಬರೆಯಲು ಸ್ನೇಹಿತರಿಗೆ ಸಹಾಯ ಮಾಡುತ್ತಿದ್ದರು.

ಆರೋಪಿಗಳು ಮಾಡಿದ ಪ್ಲಾನ್​ ಏನು?:ಇವರಿಬ್ಬರಿಗೂ ವಿದೇಶದಲ್ಲಿ ಓದುವ ಅವಕಾಶ ಸಿಕ್ಕಿತ್ತು. ಇದೇ ಅವಕಾಶವನ್ನು ಹಣ ಮಾಡುವ ಅವಕಾಶವನ್ನಾಗಿ ಮಾಡಿಕೊಳ್ಳಬೇಕೆಂದು ಯೋಜಿಸಿದರು. ಇದಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಇಬ್ಬರೂ ಬಳಸಿಕೊಂಡರು. GRE ಮತ್ತು TOEFL ಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು 20 ಸಾವಿರ ರೂಪಾಯಿ ನೀಡಿದರೆ ಅವರಿಗೆ ಉತ್ತಮ ಅಂಕ ಬರುವಂತೆ ಮಾಡಲಾಗುವುದು ಎಂದು ಜಾಹೀರಾತು ನೀಡಿದರು. ಈ ಯೋಜನೆಯನ್ನು ಅತ್ಯಂತ ಗೌಪ್ಯವಾಗಿ ಅವರು ಜಾರಿ ಮಾಡುತ್ತಿದ್ದರು.

TOEFL / GRE ಅನ್ನು ವಿಶ್ವದಾದ್ಯಂತ 11,500 ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ನಡೆಸಲಾಗುತ್ತದೆ. ಈ ಕಾಲೇಜುಗಳಲ್ಲಿ ಹೇಗಾದರೂ ಮಾಡಿ ಪ್ರವೇಶ ಪಡೆಯಲೇಬೇಕೆಂದು ಬಯಸುವ ಕೆಲ ವಿದ್ಯಾರ್ಥಿಗಳು ಇದಕ್ಕಾಗಿ ಅಡ್ಡ ಮಾರ್ಗ ಹಿಡಿಯಲು ಕೂಡ ತಯಾರಾಗಿರುತ್ತಾರೆ. ಪರೀಕ್ಷೆ ತೆಗೆದುಕೊಳ್ಳುವವರು / ಪರೀಕ್ಷೆಯನ್ನು ತೆಗೆದುಕೊಳ್ಳಲು ಅಧಿಕಾರ ಹೊಂದಿರುವ ಏಜೆಂಟ್‌ಗಳಿಗೆ ಮಾತ್ರ ಆನ್‌ಲೈನ್ ಪ್ರವೇಶವನ್ನು ಅನುಮತಿಸಲಾಗುತ್ತದೆ. ಇದಕ್ಕೆ ಧನಸಹಾಯ ಮಾಡಲು ಗುಣಶೇಖರ್ ಹಸ್ತಿನಾಪುರದ ಸ್ನೇಹಿತರೊಬ್ಬರ ಮನೆಯಲ್ಲಿ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದ.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಸ್ವಂತ ಕಂಪ್ಯೂಟರ್/ಲ್ಯಾಪ್‌ಟಾಪ್‌ನೊಂದಿಗೆ ಅಲ್ಲಿಗೆ ಆಗಮಿಸುತ್ತಾರೆ. ಪರೀಕ್ಷೆ ವೇಳೆ ಟೇಬಲ್ ಕೆಳಗೆ ಅಡಗಿ ಕುಳಿತಿದ್ದ ಕಿಶೋರ್ ಮತ್ತು ಸಂತೋಷ್ ಸ್ಕ್ರೀನ್ ಮೇಲಿದ್ದ ಪ್ರಶ್ನೆಗಳ ಚಿತ್ರ ತೆಗೆದು ಶರ್ವಣ್ ಗೆ ವಾಟ್ಸ್​ಆ್ಯಪ್​​ ನಲ್ಲಿ ಕಳುಹಿಸುತ್ತಿದ್ದರು. ಅವರು ಸರಿಯಾದ ಉತ್ತರಗಳನ್ನು ವಾಟ್ಸ್​ಆ್ಯಪ್​ ಮೂಲಕ ಕಳುಹಿಸುತ್ತಿದ್ದರು. ಕಡಿಮೆ ಅವಧಿಯಲ್ಲಿ ಹಲವು ವಿದ್ಯಾರ್ಥಿಗಳು ಇದರ ಲಾಭ ಪಡೆದಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?:ಹಲವು ಅಭ್ಯರ್ಥಿಗಳ ದೂರಿನ ನಂತರ ಗುಣಶೇಖರ್ ತಂಡದ ವಂಚನೆಗಳನ್ನು ಕಂಡು ಹಿಡಿಯಲು ಪೊಲೀಸರು ಗುಪ್ತ ಕಾರ್ಯಾಚರಣೆ ನಡೆಸಿದ್ದರು. ಆರೋಪಿಗಳಿಗೆ 25 ಸಾವಿರ ರೂಪಾಯಿ ನೀಡಿ ವಂಚನೆ ಬೆಳಕಿಗೆ ತಂದಿದ್ದಾರೆ. ಕಳೆದ ತಿಂಗಳು 23ರಂದು ಇಟಿಎಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಪ್ರಮುಖ ಆರೋಪಿ ಗುಣಶೇಖರ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದ. ಆತ ತಾನು ಬಳಸಿದ ಮೊಬೈಲ್ ಫೋನನ್ನು ಕಿರಣ್ ಗೆ ಕೊಟ್ಟಿದ್ದಾನೆ. ಆದಿತ್ಯ ಕೂಡ ತಲೆಮರೆಸಿಕೊಂಡಿದ್ದು, ಉಳಿದ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳ ಸಹಾಯದಿಂದ TOEFL / GRE ಬರೆದ ವಿದ್ಯಾರ್ಥಿಗಳ ವಿವರಗಳನ್ನು ETS ನಿರ್ವಾಹಕರು ಸಂಗ್ರಹಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ.. ಬೆಂಗಳೂರಲ್ಲಿ ತಾತನಿಗೆ 20 ವರ್ಷ ಶಿಕ್ಷೆ ಆದೇಶ

ABOUT THE AUTHOR

...view details