ಸೂರತ್(ಗುಜರಾತ್):ವಿವಾಹಿತ ವ್ಯಕ್ತಿಯೊಬ್ಬ ಇನ್ನೊಂದು ಮದುವೆಗೆ ಮಂಟಪದಲ್ಲಿ ಕುಳಿತಿದ್ದ. ಇನ್ನೇನು ವಧುವಿಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ವಿಚಿತ್ರ ಅಂದ್ರೆ ವಿವಾಹಿತನ ಮತ್ತೊಂದು ವಿವಾಹದ ಬಗ್ಗೆ ಮಾಹಿತಿ ನೀಡಿದ್ದು, ಬೇರಾರೂ ಅಲ್ಲ ಸ್ವತಃ ಆತನ ತಂದೆ.!
ಸಿನಿಮಾ ಕತೆಯಂತಿರುವ ಈ ಘಟನೆ ನಡೆದಿದ್ದು, ಗುಜರಾತ್ನ ಸೂರತ್ ಜಿಲ್ಲೆಯ ಮಹುವಾದಲ್ಲಿ. ಯಾರಿಗೂ ತಿಳಿಸದೇ ಎರಡನೇ ಮದುವೆಗೆ ಸಿದ್ಧವಾಗಿದ್ದ ವ್ಯಕ್ತಿಯನ್ನು ತಡೆಯುವ ಮೂಲಕ ಪೊಲೀಸರು ಇಬ್ಬರು ಯುವತಿಯರ ಬದುಕು ರಕ್ಷಿಸಿದ್ದಾರೆ. ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ, ಈಗಾಗಲೇ ತಾನು ಮದುವೆಯಾಗಿದ್ದನ್ನು ಆತ ಒಪ್ಪಿಕೊಂಡಿದ್ದಾನೆ.
ಘಟನೆಯ ವಿವರ:ಮಹುವಾದಲ್ಲಿ ಇಬ್ಬರು ಸಹೋದರರ ಮದುವೆ ನಿಶ್ಚಯ ಮಾಡಲಾಗಿತ್ತು. ಮದುವೆಯ ಮಂಟಪದಲ್ಲಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡು ಇನ್ನೇನು ತಾಳಿ ಕಟ್ಟುವುದೊಂದೇ ಬಾಕಿ ಇತ್ತು. ಅದಾಗಲೇ ನೋಡಿ ಘಟನೆಗೆ ತಿರುವು ಸಿಕ್ಕಿದ್ದು. ಮದುವೆಗೆ ಎಂದು ಬಂದಿದ್ದ ವರನ ತಂದೆ ಮದುವೆಯ ಕರೆಯೋಲೆ ನೋಡಿ ದಂಗಾಗಿದ್ದ. ಕಾರಣ ಹೆತ್ತ ತಂದೆಗೇ ಮಗನ ಮದುವೆ ಬಗ್ಗೆ ಗೊತ್ತಿರಲಿಲ್ಲ.
ಮಂಟಪದಲ್ಲಿ ನಡೆಯುತ್ತಿರುವುದು ತನ್ನ ಮಗನ ವಿವಾಹ. ಆತನಿಗೆ ಈಗಾಗಲೇ ಕಲ್ಯಾಣವಾಗಿ ಮಗವೂ ಇದೆ. 2ನೇ ಮದುವೆಯಾದರೆ, ಇಬ್ಬರು ಹೆಣ್ಣುಮಕ್ಕಳ ಬಾಳು ಹಾಳಾಗುತ್ತದೆ ಎಂದು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಮಾರುವೇಷದಲ್ಲಿ ಬಂದ ಖಾಕಿ ಪಡೆ:ವಿಷಯ ತಿಳಿದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮದುವೆ ಮನೆಗೆ ಬಂದಿದ್ದಾರೆ. ಅವರು ಪೊಲೀಸ್ ವೇಷದಲ್ಲಿರದೇ ಮಾರುವೇಷದಲ್ಲಿ ಯಾರಿಗೂ ತಿಳಿಯದ ಹಾಗೇ ಮನೆ ಪ್ರವೇಶಿಸಿದ್ದಾರೆ. ಎಲ್ಲರನ್ನೂ ಸುತ್ತಿವರೆದಿದ್ದ ಪೊಲೀಸರು ನಿಧಾನವಾಗಿ ವಧುವಿನ ಬಳಿಗೆ ಹೋಗಿ ವಶಕ್ಕೆ ಪಡೆದಿದ್ದಾರೆ. ಬಳಿಕ ಆತನ ಬಗ್ಗೆ ಮದುವೆಗೆ ಬಂದಿದ್ದ ಬಂಧುಗಳಿಗೆ ತಿಳಿಸಿ ಸಮಾಧಾನಿಸಿದ್ದಾರೆ.