ಚೆನ್ನೈ(ತಮಿಳುನಾಡು):ನಕಲಿ ಗ್ರಾಮೀಣ ಮತ್ತು ಕೃಷಿ ಸಹಕಾರಿ ಬ್ಯಾಂಕ್ ತೆರೆದು ಗ್ರಾಹಕರನ್ನು ವಂಚಿಸಿದ ಪ್ರಕರಣ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ. ರಾಜ್ಯದ ವಿವಿಧೆಡೆ ಬ್ಯಾಂಕ್ ಶಾಖೆಗಳನ್ನು ಆರಂಭಿಸಿ 2 ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಲಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಬ್ಯಾಂಕ್ ಖಾತೆಯಲ್ಲಿದ್ದ 57 ಲಕ್ಷ ಹಣವನ್ನು ಜಪ್ತಿ ಮಾಡಿ, ಬ್ಯಾಂಕ್ ಮಾಲೀಕನನ್ನು ಬಂಧಿಸಲಾಗಿದೆ.
6 ವರ್ಷದ ಹಿಂದೆ ಬ್ಯಾಂಕ್ ಆರಂಭ:ಬ್ಯಾಂಕ್ ಆರಂಭಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ದಾಖಲೆ ಸಲ್ಲಿಸಬೇಕು. ಬಳಿಕ ಲೀಡ್ ಬ್ಯಾಂಕಿನಿಂದ ಅನುಮೋದನೆ ಪಡೆದು, ಬ್ಯಾಂಕ್ ಆರಂಭಿಸಬೇಕು. ಈ ಎಲ್ಲ ದಾಖಲೆಗಳನ್ನು ನಕಲು ಮಾಡಿದ ಲಂಡನ್‌ನಲ್ಲಿ ಎಂಬಿಎ ಪದವಿ ಪಡೆದಿರುವ ಚಂದ್ರಬೋಸ್ ಎಂಬಾತ ತಮಿಳುನಾಡಿನ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾನೆ.
2016 ರಲ್ಲಿ ಸಹಕಾರಿ ಸಂಘದ ರೂಪದಲ್ಲಿ ನಕಲಿ ಬ್ಯಾಂಕ್ ಸೃಷ್ಟಿಸಿ, ಆಕರ್ಷಕ ಸಾಲ ಸೌಲಭ್ಯಗಳನ್ನು ಘೋಷಿಸಿ ಜನರು ಹಣ ಡೆಪಾಸಿಟ್ ಮಾಡುವಂತೆ ನೋಡಿದ್ದಾನೆ. ಬ್ಯಾಂಕ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳು, ಪಾಸ್‌ಬುಕ್‌ಗಳು, ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಚಿನ್ನಾಭರಣಗಳು ಮತ್ತು ಆನ್‌ಲೈನ್ ಹಣ ವರ್ಗಾವಣೆ ಇತ್ಯಾದಿಗಳು ನಡೆದಿವೆ. ತಿರುಮಂಗಲಂ, ನಾಮಕ್ಕಲ್, ತಿರುವಣ್ಣಾಮಲೈ, ವಿರುಧಾಚಲಂ, ಪೆರಂಬದೂರ್ ಮತ್ತು ಸೇಲಂ ಸೇರಿದಂತೆ 10 ಕ್ಕೂ ಹೆಚ್ಚು ಕಡೆ ಶಾಖೆಗಳನ್ನು ಸ್ಥಾಪಿಸಲಾಗಿದೆ.
3 ಸಾವಿರ ಗ್ರಾಹಕರಿಗೆ ವಂಚನೆ:ಬ್ಯಾಂಕ್ ಹೆಸರಿನಲ್ಲಿ ಡೆಪಾಸಿಟ್ ಮಾಡಿದ 3 ಸಾವಿರ ಗ್ರಾಹಕರ 2 ಕೋಟಿ ರೂಪಾಯಿಗೂ ಅಧಿಕ ಹಣ ನುಂಗಲಾಗಿದೆ. ಬ್ಯಾಂಕ್ ಸಿಬ್ಬಂದಿ ಹೇರಳ ಸಾಲ ಸೌಲಭ್ಯ ಘೋಷಿಸಿದಾಗ ಅನುಮಾನ ಬಂದ ವ್ಯಕ್ತಿಯೊಬ್ಬರು ದೂರು ನೀಡಿದ್ದು, ತನಿಖೆ ನಡೆಸಿದಾಗ ಕರ್ಮಕಾಂಡ ಬಯಲಾಗಿದೆ.