ಕವರ್ಧ(ಛತ್ತೀಸ್‌ಗಢ): ಹಿಂದಿಯಲ್ಲಿ ಎಂಎ ಪದವಿ ಪಡೆದಿರುವ ಸರ್ಕಾರಿ ಶಾಲೆಯ ಶಿಕ್ಷಕ ಒಂದು ಪದ ಬರೆಯಲು ವಿಫಲರಾಗಿರುವುದು ಜಿಲ್ಲಾ ಶಿಕ್ಷಣ ಅಧಿಕಾರಿಯ ಅಸಮಾಧಾನಕ್ಕೆ ಕಾರಣವಾಗಿದೆ. ಛತ್ತೀಸ್‌ಗಢದ ಕವರ್ಧಾ ಜಿಲ್ಲೆಯಲ್ಲಿ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ಮಕ್ಕಳಿಗಾಗಿ ಆರಂಭಿಸಲಾಗಿರುವ ಮೊಹಲ್ಲಾ ತರಗತಿಗಳನ್ನು ಡಿಇಒ ರಾಕೇಶ್ ಪಾಂಡೆ ಪರಿಶೀಲಿಸುತ್ತಿರುವ ವಿಡಿಯೋ ಕ್ಲಿಪ್ ವೈರಲ್ ಆಗಿದೆ.
ಡಿಇಒ ಶಿಕ್ಷಕರಿಗೆ 'अंत्येष्टि' (ಅಂತ್ಯೊಷ್ಟಿ) ಪದವನ್ನು ಬರೆಯಲು ಹೇಳುತ್ತಾರೆ. ಆದರೆ ಹಲವಾರು ಪ್ರಯತ್ನಗಳ ಹೊರತಾಗಿಯೂ ಶಿಕ್ಷಕ ಪದವನ್ನು ಸರಿಯಾಗಿ ಬರೆಯಲು ವಿಫಲರಾದರು. ರಾಯ್‌ಪುರದಿಂದ 100 ಕಿಮೀ ದೂರದಲ್ಲಿರುವ ಕವಾರಾದ ಲೋಹರಾ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ. 4 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೆಳ ದರ್ಜೆಯ ಹಿಂದಿ ಪಠ್ಯಪುಸ್ತಕಗಳನ್ನು ಸಹ ಓದಲು ಸಾಧ್ಯವಾಗದಿರುವುದನ್ನು ಗಮನಿಸಿದ ಡಿಇಒ ವಿದ್ಯಾರ್ಥಿಗಳೊಂದಿಗೆ ಮತ್ತಷ್ಟು ಸಂವಹನ ನಡೆಸಿದ ನಂತರ ಅಸಮಾಧಾನಗೊಂಡಿದ್ದಾರೆ.