ದುರ್ಗಾಪುರ (ಪಶ್ಚಿಮ ಬಂಗಾಳ): ಮನೆಯೊಂದರ ಒಳಗೆ ಇಬ್ಬರು ಸಹೋದರಿಯರು ಹಾಗೂ ಓರ್ವ ಸಹೋದರನ ಮೃತದೇಹಗಳು ಸುಟ್ಟ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ಶನಿವಾರ ಪಶ್ಚಿಮ ಬಂಗಾಳದ ದುರ್ಗಾಪುರ ಫರೀದ್ಪುರದಲ್ಲಿ ನಡೆದಿದೆ. ಹೊರ ಹೋಗಿದ್ದ ತಂದೆ ಮನೆಗೆ ಬಂದಾಗ ಮನೆ ಬೆಂಕಿ ಹೊತ್ತಿ ಉರಿಯುತ್ತಿದ್ದು, ಒಳಗಿನಿಂದ ಬೀಗ ಹಾಕಿರುವುದು ಕಂಡು ಬಂದಿದೆ. ಮೃತರನ್ನು ಮಂಗಲ್ ಸೊರೆನ್ (33), ಸುಮಿ ಸೊರೆನ್ (35) ಮತ್ತು ಬಹಮನಿ ಸೊರೆನ್ (23) ಎಂದು ಗುರುತಿಸಲಾಗಿದೆ. ದುರ್ಗಾಪುರ ಫರೀದ್‌ಪುರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸುಮಿ ಸೊರೆನ್ ಕೋಲ್ಕತ್ತಾದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರೆ, ಇನ್ನೊಬ್ಬ ಸಹೋದರಿ ಗೃಹಿಣಿಯಾಗಿದ್ದಳು. ಇತ್ತೀಚೆಗಷ್ಟೇ ಮಂಗಲ್ ಸೋರೆನ್ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯದಲ್ಲೇ ಮದುವೆಯಾಗುವವರಿದ್ದರು. ಮಂಗಲ್ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರ ಸಹೋದರಿ ಸುಮಿ ಸೊರೆನ್ ಮನೆಗೆ ಬಂದಿದ್ದರು. ಅವರ ವಯಸ್ಸಾದ ತಂದೆ ಹೋಫ್ನಾ ಸೊರೆನ್ ಮನೆಗೆ ಬಂದಾಗ, ಬಾಗಿಲು ಲಾಕ್ ಮಾಡಿರುವುದು ಕಂಡು ಬಂದಿದೆ. ಮನೆ ಒಳಗಿನಿಂದ ಹೊಗೆ ಬರುತ್ತಿರುವುದನ್ನು ಕಂಡಿದ್ದಾರೆ.
ಬೆಂಕಿ ಉರಿಯುತ್ತಿರುವುದನ್ನು ಗಮನಿಸಿದ ತಂದೆ ಹಫ್ನಾ ಬಾಗಿಲು ಒಡೆದು ಒಳ ಹೋಗಿದ್ದಾರೆ. ಬೆಂಕಿ ಹೊತ್ತಿಕೊಂಡಿದ್ದ ಮನೆಯೊಳಗೆ ತಮ್ಮ ಮಕ್ಕಳು ಸುಟ್ಟು ಕರಕಲಾಗಿ ಬಿದ್ದಿರುವುದನ್ನು ಕಂಡಿದ್ದಾರೆ. ಕೂಡಲೇ ದುರ್ಗಾಪುರ ಫರೀದ್‌ಪುರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕಾಗಮಿಸಿದ್ದರು. ತಕ್ಷಣವೇ ಸುಟ್ಟ ದೇಹಗಳನ್ನು ಹೊರತೆಗೆಯಲಾಗಿದ್ದು, ಮಂಗಲ್ ಸೋರೆನ್ ಅವರು ತೀವ್ರ ಸುಟ್ಟ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಸಹೋದರಿಯರನ್ನು ದುರ್ಗಾಪುರ ಉಪ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಅಲ್ಲಿ ವೈದ್ಯರು ಇಬ್ಬರೂ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.