ಲಖಿಂಪುರ ಖೇರಿ (ಉತ್ತರ ಪ್ರದೇಶ):ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದ ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ 14 ಮಂದಿಯ ವಿರುದ್ಧ ನ್ಯಾಯಾಲಯ ದೋಷಾರೋಪಣೆ ಹೊರಿಸಿದೆ. ಇದರಲ್ಲಿ 13 ಆರೋಪಿಗಳ ವಿರುದ್ಧ ಕೊಲೆ, ದಂಗೆ ಸೇರಿ ವಿವಿಧ ಗಂಭೀರ ಸ್ವರೂಪದ ಐಪಿಸಿ ಸೆಕ್ಷನ್‌ಗಳಡಿ ಗಂಭೀರ ಆರೋಪಗಳನ್ನು ಮಾಡಲಾಗಿದೆ.
ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ, ಸಹಚರರಾದ ಅಂಕಿತ್ ದಾಸ್, ತಾಲಿಫ್ ಅಲಿಯಾಸ್ ಕಾಳೆ, ಸುಮಿತ್ ಜೈಸ್ವಾಲ್, ಸತ್ಯಂ ತ್ರಿಪಾಠಿ, ಆಶಿಶ್ ಪಾಂಡೆ, ಶಿಶುಪಾಲ್, ಉಲ್ಲಾಸ್ ಕುಮಾರ್, ಲವಕುಶ್ ರಾಣಾ, ಶೇಖರ್ ಭಾರತಿ, ರಿಂಕು ರಾಣಾ, ಧರ್ಮೇಂದ್ರ ಬಂಜಾರಾ ಸೇರಿದಂತೆ 13 ಆರೋಪಿಗಳ ಹೆಸರು ದೋಷಾರೋಪಣೆಯಲ್ಲಿವೆ. ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಸೇರಿದಂತೆ ಎಲ್ಲರನ್ನೂ ಲಖಿಂಪುರ ಖೇರಿ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ. ಮತ್ತೊಬ್ಬ ಆರೋಪಿ ವೀರೇಂದ್ರ ಶುಕ್ಲಾ ಜಾಮೀನಿನ ಮೇಲೆ ಹೊರಗಿದ್ದಾರೆ.