ನವದೆಹಲಿ:ವಸತಿ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ಬಿಡಿಎ ಗುತ್ತಿಗೆ ನೀಡುವಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರಿರುವ ಮಂಜೂರಾತಿ ನಿರಾಕರಣೆ ವಿಷಯವನ್ನು ಮರುಪರಿಶೀಲಿಸುವುದಾಗಿ ಕರ್ನಾಟಕ ಸರ್ಕಾರ ಇಂದು (ಮಂಗಳವಾರ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ, ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಮನ್ ಪನ್ವಾರ್, ಈ ಪ್ರಕರಣದ ಆರೋಪಗಳು ಗಂಭೀರವಾಗಿರುವುದರಿಂದ ರಾಜ್ಯ ಸರ್ಕಾರವು ವಿಷಯವನ್ನು ಮರುಪರಿಶೀಲಿಸುತ್ತದೆ ಎಂದು ತಿಳಿಸಿದರು. ಮತ್ತೊಂದೆಡೆ, ಯಡಿಯೂರಪ್ಪ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ಇದು ಆಡಳಿತದ ವಿರುದ್ಧದ ಸೇಡಿನ ಪ್ರಕರಣವಾಗಿ ಕಾಣುತ್ತಿಲ್ಲ, ಬದಲಾಗಿ ಸೇಡಿನ ರೂಪಾಂತರವಾಗಿದೆ ಎಂದು ವಾದಿಸಿದರು.
ಅಲ್ಲದೇ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧದ ದಾಖಲಾದ ಎಫ್ಆರ್ಐ ರದ್ದುಪಡಿಸುವ ವಿಚಾರದ ಪ್ರಕರಣದಲ್ಲಿ ಮತ್ತೊಂದು ನ್ಯಾಯಪೀಠದ ಮುಂದೆ ತಾವು ವಾದ ಮಂಡಿಸುತ್ತಿರುವುದರಿಂದ ಈ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ವಕೀಲ ಲೂತ್ರಾ ಕೋರಿದರು. ಈ ವೇಳೆ, ಈ ಸರ್ಕಾರವು ತನ್ನ ನಿರ್ಧಾರವನ್ನು ತಿಳಿಸುವ ಸಂಬಂಧ ಮೂರು ವಾರಗಳ ನಂತರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಪೀಠ ತಿಳಿಸಿತು. ಮತ್ತೊಂದೆಡೆ, ದೂರುದಾರ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಪರ ವಕೀಲರು ತಮ್ಮ ವಾದ ಮಂಡಿಸಿ, ಈ ವಿಷಯವು ದೀರ್ಘಕಾಲದವರೆಗೆ ತಡೆಹಿಡಿಯಲ್ಪಟ್ಟಿರುವುದರಿಂದ ವಿಚಾರಣೆಗೆ ನಿರ್ದಿಷ್ಟ ದಿನಾಂಕ ನೀಡಬೇಕೆಂದು ಮನವಿ ಮಾಡಿದರು.
ಪ್ರಕರಣವೇನು?: 2019-21ರಲ್ಲಿ ಯಡಿಯೂರಪ್ಪನವರ ಅಧಿಕಾರಾವಧಿಯಲ್ಲಿ ವಸತಿ ಸಮುಚ್ಚಯ ನಿರ್ಮಿಸಲು ನಿರ್ಮಾಣ ಸಂಸ್ಥೆಗೆ ಬಿಡಿಎ ಗುತ್ತಿಗೆ ನೀಡಲು 12 ಕೋಟಿ ರೂಪಾಯಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ನಲ್ಲಿ ತನಿಖೆಗೆ ತಡೆ ನೀಡಿ ಸುಪ್ರೀಂ ಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆದೇಶ ನೀಡಿತ್ತು. ಎಫ್‌ಐಆರ್ ದಾಖಲಿಸಲು ಆದೇಶ ಹೊರಡಿಸುವ ಮುನ್ನ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂಬ ಅಂಶವನ್ನು ನಿರ್ಲಕ್ಷಿಸಿದ್ದ ಕರ್ನಾಟಕ ಹೈಕೋರ್ಟ್‌ನ ಸಿಂಧುತ್ವವನ್ನು ಪ್ರಶ್ನಿಸಿ ಯಡಿಯೂರಪ್ಪ ಸುಪ್ರೀಂ ಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ಪುತ್ರ ಬಿ.ವೈ.ವಿಜಯೇಂದ್ರ, ಅಳಿಯ ಸಂಜಯಶ್ರೀ, ಮೊಮ್ಮಗ ಶಶಿಧರ್ ಮರಡಿ ಸೇರಿ ಇತರರನ್ನು ಆರೋಪಿಗಳೆಂದು ದೂರುದಾರರು ಹೆಸರಿಸಿದ್ದಾರೆ.
ಇದನ್ನು ಓದಿ:ಸರ್ಕಾರಿ ನೌಕರಿಗಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ: ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೊರ್ಟ್ ನಿರಾಕರಣೆ