ಚಂಡೀಗಢ(ಪಂಜಾಬ್) :ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುಭದೀಪ್ ಸಿಂಗ್ ಅಕಾ ಸಿಧು ಮೂಸೆವಾಲಾ ವಿರುದ್ಧ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ.
ಪಂಜಾಬ್ನಲ್ಲಿ ನಾಳೆ ಮತದಾನ ನಡೆಯಲಿದೆ. ಶುಕ್ರವಾರ ಸಂಜೆಗೆ ಚುನಾವಣಾ ಪ್ರಚಾರ ಕೊನೆಗೊಂಡಿತ್ತು. ಆದರೆ, ಸಿಎಂ ಚನ್ನಿ ಶುಕ್ರವಾರ ಸಂಜೆ ವೇಳೆ ಮಾನ್ಸಾ ಜಿಲ್ಲೆಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ್ದು, ಇದು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷ(ಆಪ್) ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ದೂರು ದಾಖಲಾದ ಬಳಿಕ ಅಧಿಕಾರಿಗಳು ಮಾನ್ಸಾ ಜಿಲ್ಲೆಗೆ ಭೇಟಿ ನೀಡುವ ಹೊತ್ತಿಗೆ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಅಲ್ಲಿಂದ ವಾಪಸ್ಸಾಗಿದ್ದರು. ಅಲ್ಲಿನ ಜನರನ್ನು ಈ ಬಗ್ಗೆ ವಿಚಾರಿಸಿದಾಗ, ಸಿಎಂ ಇಲ್ಲಿನ ಗುರುದ್ವಾರಕ್ಕೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದರು ಎಂದು ತಿಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಹರ್ಜಿಂದರ್ ಸಿಂಗ್ ಮಾಹಿತಿ ನೀಡಿದ್ದಾರೆ.