ಶ್ರೀನಗರ:ಇಂಡಿಯಾವನ್ನು ಭಾರತ ಎಂದು ಮರುನಾಮಕರಣ ಮಾಡಲಾಗುತ್ತದೆ ಎಂಬ ವದಂತಿಗೆ ಪ್ರತಿಪಕ್ಷದ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ನ್ಯಾಷನಲ್ ಕಾನ್ಫರೆನ್ಸ್ ಕಿಡಿ ಕಾರಿದೆ. ''ಧೈರ್ಯವಿದ್ದರೆ ಬದಲಾಯಿಸಿ'' ಎಂದು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸವಾಲು ಹಾಕಿದ್ದಾರೆ.
ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ದೇಶದ ಹೆಸರನ್ನು ಬದಲಾಯಿಸಲು ಬಯಸಿದರೆ ಸಂವಿಧಾನದ ತಿದ್ದುಪಡಿ ಅಗತ್ಯ. ಅಷ್ಟು ಧೈರ್ಯವಿದ್ದರೆ ಮೊದಲು ಆ ಕೆಲಸ ಕೈಗೊಳ್ಳಿ" ಎಂದರು.
"ದೇಶದ ಹೆಸರು ಬದಲಾಯಿಸುವುದು ಅಷ್ಟು ಸುಲಭವಲ್ಲ. ಇದನ್ನು ಮಾಡಲು, ನೀವು ದೇಶದ ಸಂವಿಧಾನವನ್ನು ಬದಲಾಯಿಸಬೇಕಾಗುತ್ತದೆ. ನಿಮಗೆ ಆ ಧೈರ್ಯವಿದ್ದರೆ ಅದನ್ನು ಮಾಡಿ, ನಾವೂ ನೋಡುತ್ತೇವೆ. ಯಾರು ನಿಮ್ಮನ್ನು ಬೆಂಬಲಿಸುತ್ತಾರೆ" ಒಮರ್ ಅಬ್ದುಲ್ಲಾ ಹೇಳಿದರು.
ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ದೇಶವನ್ನು ಆಳುತ್ತಿರುವ ಕೇಂದ್ರದ ನಾಯಕರು ಮೊದಲು ಸಂವಿಧಾನವನ್ನು ಓದಬೇಕು. ಇಂಡಿಯಾ ಮತ್ತು ಭಾರತ ಎರಡೂ ಒಂದೇ ಎಂದು ಸಂವಿಧಾನದಲ್ಲಿಯೇ ಉಲ್ಲೇಖಿಸಲಾಗಿದೆ. ವಿನಾಕಾರಣ ಮಾಧ್ಯಮಗಳು ಕೂಡ ಈ ಬಗ್ಗೆ ವಿವಾದ ಸೃಷ್ಟಿಸುತ್ತಿವೆ ಎಂದಿದ್ದಾರೆ.
"ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ ಕಾರ್ಗಿಲ್‌ನ ಐದನೇ ಲಡಾಖ್ ಸ್ವಾಯತ್ತ ಬೆಟ್ಟಗಳ ಅಭಿವೃದ್ಧಿ ಮಂಡಳಿಗೆ (LAHDC) ಚುನಾವಣೆ ನಡೆಸಲು ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ತಮ್ಮ ಪಕ್ಷವು ಸ್ಥಳೀಯ ನಾಯಕ ಅಭಿಪ್ರಾಯ ಸಂಗ್ರಹದೊಂದಿಗೆ ಬೆಂಬಲ ಪಡೆಯಲು ಎದುರು ನೋಡುತ್ತಿದೆ. ಆದರೆ, ಒಂದು ರಾಜಕೀಯ ಪಕ್ಷವಾಗಿ ನಮ್ಮ ಹಕ್ಕಿನ ವಿಷಯಕ್ಕಾಗಿ ನಾವು ಹೋರಾಡಬೇಕಾಗಿರುವುದು ದುರದೃಷ್ಟಕರ" ಎಂದು ಅವರು ಇದೇ ವೇಳೆ ಅಸಮಾಧಾನ ಹೊರಹಾಕಿದರು.
ಕಾರ್ಗಿಲ್‌ನ 30 ಸದಸ್ಯರ ಲಡಾಖ್ ಸ್ವಾಯತ್ತ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್‌ನ 26 ಸ್ಥಾನಗಳಿಗೆ ಅಕ್ಟೋಬರ್ 4ರಂದು ಚುನಾವಣೆ ನಡೆಯಲಿದೆ. ಮೊದಲಿನ ಅಧಿಸೂಚನೆ ಪ್ರಕಾರ LAHDCಗೆ ಚುನಾವಣೆಯನ್ನು ಸೆಪ್ಟೆಂಬರ್ 10 ರಂದು ನಡೆಸಿ ಸೆಪ್ಟೆಂಬರ್ 14 ರಂದು ಮತ ಎಣಿಕೆಯನ್ನು ನಡೆಸಲಾಗುವುದು ಎಂದು ಘೋಷಿಸಿತ್ತು.
ಹೊಸ ಅಧಿಸೂಚನೆಯ ಪ್ರಕಾರ, ಸೆಪ್ಟೆಂಬರ್ 9 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 16 ಕೊನೆಯ ದಿನಾಂಕ ಆಗಿದೆ. ನಾಮಪತ್ರ ಹಿಂಪಡೆಯಲು ಸೆಪ್ಟೆಂಬರ್ 20 ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ. ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ. ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಅಕ್ಟೋಬರ್ 11 ರೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
LAHDCಗೆ ಚುನಾವಣೆ ನಡೆಸಲು ಲಡಾಖ್ ಆಡಳಿತವು ಆಗಸ್ಟ್ 2 ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್ ಕೆಲವು ಕಾರಣಗಳಿಂದ ರದ್ದುಗೊಳಿಸಿತ್ತು. ಅಲ್ಲದೇ ಏಳು ದಿನಗಳಲ್ಲಿ ಹೊಸ ಅಧಿಸೂಚನೆಯನ್ನು ಹೊರಡಿಸುವಂತೆ ಸೂಚಿಸಿತ್ತು. ಅದರಂತೆ ಇದೀಗ ಚುನಾವಣೆ ನಡೆಯಲಿದೆ.
ಇದನ್ನೂ ಓದಿ:ರಾವಣ, ಕಂಸನಿಂದ ಸನಾತನ ಧರ್ಮ ಅಳಿಸಲು ಸಾಧ್ಯವಾಗಿಲ್ಲ, ಅಧಿಕಾರ ದಾಹದ ಪರಾವಲಂಬಿಗಳಿಂದಲೂ ಧಕ್ಕೆಯಾಗದು: ಸಿಎಂ ಯೋಗಿ