ಪಾಟ್ನಾ( ಬಿಹಾರ):ಬಿಹಾರ ಮತ್ತು ಉತ್ತರ ಪ್ರದೇಶದ ಜನರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅವರ ಹೇಳಿಕೆ ಖಂಡಿಸಿರುವ ನಾಯಕರು ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ. ಈ ನಡುವೆ ಶಿಕ್ಷಣ ತಜ್ಞ ಮತ್ತು ಬಿಹಾರ ಪ್ರದೇಶ ಕಾಂಗ್ರೆಸ್‌ನ ರಾಜಕೀಯ ವ್ಯವಹಾರಗಳ ಸಮಿತಿ ಸದಸ್ಯೆ ಡಾ. ಚಂದ್ರಿಕಾ ಪ್ರಸಾದ್ ಯಾದವ್, ಮಾರನ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. 15 ದಿನಗಳೊಳಗೆ ಬಿಹಾರ ಮತ್ತು ಉತ್ತರ ಪ್ರದೇಶದ ಜನರ ಕ್ಷಮೆ ಯಾಚಿಸದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲೀಗಲ್ ನೋಟಿಸ್ನಲ್ಲಿ ಎಚ್ಚರಿಕೆ ಕೂಡಾ ನೀಡಿದ್ದಾರೆ.
ಬಿಹಾರ ಕಾಂಗ್ರೆಸ್ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ದಯಾನಿಧಿ ಮಾರನ್‌ಗೆ ನೋಟಿಸ್ ನೀಡಿದೆ. ಈ ಬಗ್ಗೆ ಮಾತನಾಡಿರುವ ಚಂದ್ರಿಕಾ ಯಾದವ್ ಅವರು, ತಮಿಳುನಾಡಿನಲ್ಲಿ ಇರುವ ಅನೇಕ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಬಿಹಾರ ಮತ್ತು ಯುಪಿಯಿಂದ ಬಂದವರು ಎಂಬುದು ದಯಾನಿಧಿ ಮಾರನ್‌ಗೆ ಬಹುಶಃ ತಿಳಿದಿಲ್ಲ ಎಂದು ಹೇಳಿದ್ದಾರೆ. ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆಗಳಿಗೂ ಬಿಹಾರದ ಜನರು ಸೇವೆ ಸಲ್ಲಿಸಿಸುತ್ತಿದ್ದಾರೆ. ಇದು ತಮಿಳುನಾಡಿಗೆ ಮಾತ್ರವಲ್ಲ, ಇಡೀ ಭಾರತದಾದ್ಯಂತ ಬಿಹಾರದ ಅಧಿಕಾರಿಗಳು ಇದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಅವರು ನೆನಪಿಸಿದ್ದಾರೆ.