2023 ರಲ್ಲಿ ಭಾರತದ ಸಾಧನೆಗಳು ಹಲವಾರು. ಭೂಮಿಯ ಏಕೈಕ ಉಪಗ್ರಹ ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಲ್ಯಾಂಡರ್ ಇಳಿಸಿದ ಭಾರತ ಲ್ಯಾಗ್ರೇಂಜ್ ಪಾಯಿಂಟ್-ಎಲ್ 1ನಿಂದ ಸೂರ್ಯನ ಅಧ್ಯಯನ ಮಾಡಲು ಉಪಗ್ರಹ ಉಡಾವಣೆ ಮಾಡಿತು. ಈ ಸಾಧನೆಗಳು ದೇಶಕ್ಕೆ ಹೆಮ್ಮೆ ಮೂಡಿಸಿದರೆ ಮಣಿಪುರ ಜನಾಂಗೀಯ ಕಲಹ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿತು. ಒಡಿಶಾದ ಬಾಲಸೋರ್ನಲ್ಲಿ ಕನಿಷ್ಠ 296 ಜನರ ಸಾವಿಗೆ ಕಾರಣವಾದ ತ್ರಿವಳಿ ರೈಲು ಅಪಘಾತ ದುರಂತ, ದೆಹಲಿಯಲ್ಲಿನ ಗಾಳಿಯ ಕಳಪೆ ಗುಣಮಟ್ಟ ಮತ್ತು ಐತಿಹಾಸಿಕ ಪ್ರವಾಹಗಳು ಈ ವರ್ಷ ದೇಶ ಎದುರಿಸಿದ ವಿಪತ್ತುಗಳಲ್ಲಿ ಸೇರಿವೆ.
ಆಗಸ್ಟ್ 23 ರ ಸಂಜೆ 6.03 ಕ್ಕೆ ಭಾರತದ ಚಂದ್ರಯಾನ -3 ನೌಕೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯಿತು. ಇದು ದೇಶವನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ರಾಷ್ಟ್ರಗಳ ಪಟ್ಟಿಗೆ ಸೇರಿಸಿತು. ಜುಲೈ 14 ರಂದು ಉಡಾವಣೆಯಾದ ಚಂದ್ರಯಾನ -3 41 ದಿನಗಳ ನಂತರ ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದಿತ್ತು. ವಿಕ್ರಮ್ ಲ್ಯಾಂಡರ್ 1.4 ಬಿಲಿಯನ್ ಭಾರತೀಯರ ಕನಸುಗಳ ಜೊತೆಗೆ ಆರು ಚಕ್ರಗಳ ರೋವರ್ ಪ್ರಜ್ಞಾನ್ ಅನ್ನು ಹೊತ್ತೊಯ್ದಿತ್ತು.
ಗಾಳಿಯ ಕಳಪೆ ಗುಣಮಟ್ಟದ ಚಕ್ರ ಈ ಬಾರಿಯೂ ಯಥಾಪ್ರಕಾರ ದೆಹಲಿಯಲ್ಲಿ ಮರುಕಳಿಸಿತು. ವಿಷಕಾರಿ ಗಾಳಿಯು ದೆಹಲಿಯನ್ನು ಆವರಿಸಿತ್ತು. ಗಾಳಿಯ ಗುಣಮಟ್ಟವು ಅಕ್ಟೋಬರ್ ನಂತರ ಅನೇಕ ಬಾರಿ 'ಕಳಪೆ' ಯಿಂದ 'ತೀವ್ರ ಕಳಪೆ' ಮತ್ತು 'ತೀವ್ರ ಪ್ಲಸ್ ಕಳಪೆಗೆ' ಗೆ ತಿರುಗಿತು. ಇದು ನವೆಂಬರ್ನಲ್ಲಿ ಉತ್ತುಂಗಕ್ಕೇರಿತು. ಕೃಷಿ ತ್ಯಾಜ್ಯ ಸುಡುವಿಕೆ ಮತ್ತು ವಾಹನ ಮಾಲಿನ್ಯದಿಂದಾಗಿ ದೆಹಲಿಯಲ್ಲಿ ವಾಯುಮಾಲಿನ್ಯ ವಿಕೋಪಕ್ಕೆ ತಿರುಗಿತ್ತು. ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತು ಅಂದರೆ ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್ಎಪಿ) - ಹಂತ 4, ತುರ್ತು ಪ್ರತಿಕ್ರಿಯೆ ಕ್ರಿಯಾ ಯೋಜನೆ ಅಡಿಯಲ್ಲಿ ಕ್ರಮಗಳನ್ನು ಘೋಷಿಸಿತ್ತು. ಇದರನ್ವಯ ದೆಹಲಿಯ ಹೊರಗೆ ನೋಂದಾಯಿಸಲಾದ ಲಘು ವಾಣಿಜ್ಯ ವಾಹನಗಳು ಮತ್ತು ದೆಹಲಿ ನೋಂದಾಯಿತ ಡೀಸೆಲ್ ಚಾಲಿತ ಮಧ್ಯಮ ಸರಕು ವಾಹನಗಳು ಮತ್ತು ಭಾರಿ ಸರಕು ವಾಹನಗಳ ಸಂಚಾರವನ್ನು ದೆಹಲಿಯಲ್ಲಿ ನಿರ್ಬಂಧಿಸಲಾಗಿತ್ತು ಮತ್ತು ನಿರ್ಮಾಣ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿತ್ತು.
ದೆಹಲಿಯಲ್ಲಿ ಇದು ಮಾತ್ರವಲ್ಲದೆ ಇನ್ನೂ ಅನೇಕ ರೀತಿಯ ಪ್ರಕೃತಿ ವಿಕೋಪಗಳು ಈ ವರ್ಷ ಮರುಕಳಿಸಿದವು. ಪ್ರವಾಹದ ನೀರು ಭಾರತದ ಸರ್ವೋಚ್ಚ ನ್ಯಾಯಾಲಯದ ದ್ವಾರಕ್ಕೆ ತಲುಪಿತ್ತು ಮತ್ತು ಇನ್ನೇನು ರಾಜ್ ಘಾಟ್ಗೆ ನೀರು ನುಗ್ಗುವ ಹಂತಕ್ಕೆ ಬಂದಿತ್ತು. ಯಮುನಾ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿದು ರಾಜಧಾನಿಯ ತಗ್ಗು ಪ್ರದೇಶಗಳು ಜಲಾವೃತಗೊಂಡವು. ಜುಲೈ 13 ರಂದು, ಯಮುನಾ ನದಿ ನೀರಿನ ಮಟ್ಟ ದಾಖಲೆಯ 208.66 ಮೀಟರ್ಗೆ ಏರಿಕೆಯಾಗಿತ್ತು. ಯಮುನಾ ನದಿಯು ಜುಲೈ 10 ರಿಂದ ಎಂಟು ದಿನಗಳ ಕಾಲ ಅಪಾಯದ ಮಟ್ಟವಾದ 205.33 ಮೀಟರ್ ಮೀರಿ ಹರಿಯಿತು.
ಮಣಿಪುರದ ಮೇ 4 ರ ವೀಡಿಯೊ ರಾಷ್ಟ್ರದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿತು ಮತ್ತು ದೇಶಾದ್ಯಂತ ಕಂಪನದ ಅಲೆಗಳನ್ನು ಉಂಟು ಮಾಡಿತು. ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ನಡೆದ ಘಟನೆಯ ವೀಡಿಯೊದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಪುರುಷರ ಗುಂಪು ಕಿರುಕುಳ ನೀಡುತ್ತಿರುವುದು ಬಹಿರಂಗವಾಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ನಾಲ್ವರನ್ನು ಬಂಧಿಸಲಾಯಿತು. ಈ ವೀಡಿಯೊವನ್ನು ಮತ್ತೆ ಶೇರ್ ಮಾಡದಂತೆ ಸರ್ಕಾರ ನಿರ್ಬಂಧಿಸಿದೆ. ಈಶಾನ್ಯ ರಾಜ್ಯದಲ್ಲಿನ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಅನೇಕ ಅರ್ಜಿಗಳನ್ನು ಸಲ್ಲಿಸಲಾಗಿದೆ ಮತ್ತು ಸಿಬಿಐ ತನಿಖೆ ನಡೆಸಿದ ಕನಿಷ್ಠ 17 ಪ್ರಕರಣಗಳನ್ನು ವಿಚಾರಣೆಗಾಗಿ ನೆರೆಯ ಅಸ್ಸಾಂಗೆ ವರ್ಗಾಯಿಸಲಾಗಿದೆ.
ಬಹುಸಂಖ್ಯಾತ ಮೈಟಿ ಸಮುದಾಯವು ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿತ್ತು. ಈ ಬೇಡಿಕೆಯನ್ನು ವಿರೋಧಿಸಿ ಗುಡ್ಡಗಾಡು ಜಿಲ್ಲೆಗಳಲ್ಲಿ ನಡೆದ 'ಬುಡಕಟ್ಟು ಐಕ್ಯತಾ ಮೆರವಣಿಗೆ'ಯ ನಂತರ ಮೇ 3 ರಂದು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾದಾಗಿನಿಂದ 170 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ನೂರಾರು ಜನರು ಗಾಯಗೊಂಡರು.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಘಟನೆಯೊಂದರ ವೀಡಿಯೊ ದೇಶದ ಮನಕಲಕಿತು. ರಕ್ತಸ್ರಾವದಿಂದ ಬಳಲುತ್ತಿದ್ದ ಮತ್ತು ಅರೆಬೆತ್ತಲೆಯಾಗಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಬಾಲಕಿಯೊಬ್ಬಳನ್ನು ಜನ ಓಡಿಸಿದ ಘಟನೆ ಇದಾಗಿತ್ತು. ನಮ್ಮ ಸಮಾಜದಲ್ಲಿ ಮಾನವೀಯತೆಯ ಪ್ರಜ್ಞೆ ಮರೆಯಾಗಿ ಹೋಯಿತಾ ಎಂಬ ಪ್ರಶ್ನೆಯನ್ನು ಈ ವಿಡಿಯೋ ಹುಟ್ಟು ಹಾಕಿತು.
ಜನವರಿ 3 ರಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ 20,000 ಕ್ಕೂ ಹೆಚ್ಚು ಜನಸಂಖ್ಯೆಯ ಜೋಶಿಮಠ್ ಪಟ್ಟಣದಲ್ಲಿ ಭೂಕುಸಿತ ಸಂಭವಿಸಿದ್ದು ಈ ವರ್ಷದ ಭಾರಿ ಅನಾಹುತಗಳಲ್ಲಿ ಒಂದಾಗಿದೆ. 6,150 ಅಡಿ ಎತ್ತರದಲ್ಲಿರುವ ಈ ಪಟ್ಟಣದಲ್ಲಿ 868 ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅವುಗಳಲ್ಲಿ 181 ಕಟ್ಟಡಗಳನ್ನು ಅಸುರಕ್ಷಿತವೆಂದು ಪರಿಗಣಿಸಲಾಗಿದೆ. ಜೋಶಿಮಠದಲ್ಲಿನ ಭೂ ಕುಸಿತವನ್ನು ಎಂಟು ವಿವಿಧ ಸಂಸ್ಥೆಗಳು ಅಧ್ಯಯನ ಮಾಡಿದವು. ಪಟ್ಟಣವು ಸಡಿಲವಾದ ಕೆಸರು ಅಡಿಪಾಯದ ಮೇಲೆ ನೆಲೆಗೊಂಡಿದೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯ ಒತ್ತಡ ಮತ್ತು ಹೋಟೆಲ್ಗಳು ಸೇರಿದಂತೆ ಬಹುಮಹಡಿ ಕಟ್ಟಡಗಳ ನಿರ್ಮಾಣದ ಕಾರಣದಿಂದ ಭೂಕುಸಿತ ಸಂಭವಿಸುತ್ತಿದೆ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿತು.