ಬೆಂಗಳೂರು:ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ- 3 ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಸಂಜೆ ತಿಳಿಸಿದೆ.
ಇದು ಚಂದ್ರಯಾನ-3. ನಾನು ಚಂದ್ರನ ಗುರುತ್ವಾಕರ್ಷಣೆಯನ್ನು ಅನುಭವಿಸುತ್ತಿದ್ದೇನೆ. ಚಂದ್ರಯಾನ-3 ಅನ್ನು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ. ಮುಂದಿನ ಕಾರ್ಯಾಚರಣೆಯಾದ ಕಕ್ಷೆಯ ಕಡಿತ 2023ರ ಆಗಸ್ಟ್ 6ರ ರಾತ್ರಿ 11 ಗಂಟೆ ಸುಮಾರಿಗೆ ಗದಿಪಡಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ - 3 ಉಡಾವಣೆಯಾಗಿದೆ. ಈ ಬಾಹ್ಯಾಕಾಶ ನೌಕೆ ಭೂಮಿಯ ಸುತ್ತಲಿನ ತನ್ನ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಿ ಇದೀಗ ಚಂದ್ರನೆಡೆಗೆ ಪ್ರಯಾಣ ಬೆಳೆಸಿದೆ. ಹಂತ ಹಂತವಾಗಿ ಐದು ಬಾರಿ ಕಕ್ಷೆ ಹೆಚ್ಚೆಚ್ಚು ಪ್ರಯಾಣಿಸಿರುವ ಗಗನ ನೌಕೆ ಈಗಾಗಲೇ ತನ್ನ ಮೂರನೇ ಎರಡರಷ್ಟು ಪ್ರಯಾಣವನ್ನು ಪೂರ್ಣಗೊಳಿಸಿದೆ.
ಇದನ್ನೂ ಓದಿ:3ನೇ ಎರಡರಷ್ಟು ದೂರವನ್ನು ಯಶಸ್ವಿಯಾಗಿ ಕ್ರಮಿಸಿದ ಚಂದ್ರಯಾನ-3
ಶನಿವಾರ ಸಂಜೆ 7 ಗಂಟೆಗೆ ಲೂನಾರ್ ಆರ್ಬಿಟ್ ಇನ್‌ಸರ್ಷನ್ (ಎಲ್ಐಒ - ಚಂದ್ರನ ಕಕ್ಷೆಗೆ ಸೇರಿಸುವಿಕೆ) ಮೂಲಕ ಚಂದ್ರಯಾನ-3 ಚಂದ್ರನನ್ನು ತಲುಪಿದೆ. ಭಾರತದ ನೌಕೆಯು ಚಂದ್ರನ ಗುರುತ್ವಾಕರ್ಷಣಾ ವಲಯವನ್ನು ಪ್ರವೇಶಿಸುವುದು ಚಂದ್ರನೆಡೆಗಿನ ಪ್ರಯಾಣದಲ್ಲಿ ಮಹತ್ತರ ಘಟ್ಟವಾಗಿದೆ. ಈಗ ಈ ನೌಕೆ ಪ್ರಯಾಣದ ಅಂತಿಮ ಹಂತದಲ್ಲಿದೆ. ಆಗಸ್ಟ್ 23ರಂದು ಚಂದ್ರನ ಮೇಲ್ಮೈಯಲ್ಲಿ ಮೃದು ಲ್ಯಾಂಡಿಂಗ್ ಆಗಲಿದೆ ಎಂದು ಇಸ್ರೋ ತಿಳಿಸಿದೆ.
ಆಗಸ್ಟ್ 1ರಂದು ಬಾಹ್ಯಾಕಾಶ ನೌಕೆ ತನ್ನ ಇಂಜಿನ್ ಅನ್ನು ಆರಂಭಿಸಿ, ಚಂದ್ರನ ಕಕ್ಷೆಯ ಬಳಿಗೆ ತಲುಪಿತ್ತು. ಇದಕ್ಕಾಗಿ ಒಂದು ನಿರ್ಣಾಯಕವಾದ ಚಲನೆಯನ್ನು ನಡೆಸಿ ಭೂಮಿಯ ಕಕ್ಷೆಯಿಂದ ಚಂದ್ರನ ಕಡೆಗೆ ತೆರಳಿತ್ತು. ಆಗಸ್ಟ್ 17ರಂದು ಇಸ್ರೋದ ಪಾಲಿಗೆ ಮುಂದಿನ ಅತಿದೊಡ್ಡ ದಿನವಾಗಿದೆ. ಅಂದು ಇಸ್ರೋ ಲ್ಯಾಂಡಿಂಗ್ ಮಾಡ್ಯುಲ್‌ನ್ನು ಪ್ರೊಪಲ್ಷನ್ ಮಾಡ್ಯುಲ್‌ನಿಂದ ಬೇರ್ಪಡಿಸುತ್ತದೆ.
ಲ್ಯಾಂಡಿಂಗ್ ಮಾಡ್ಯುಲ್ ಆಗಿರುವ ವಿಕ್ರಮ್ ತನ್ನೊಳಗೆ ಪ್ರಗ್ಯಾನ್ ಎಂಬ ರೋವರ್ ಅನ್ನು ಹೊಂದಿದೆ. ಪ್ರೊಪಲ್ಷನ್ ಮಾಡ್ಯುಲ್‌ನಿಂದ ಬೇರ್ಪಟ್ಟ ಬಳಿಕ ವಿಕ್ರಮ್ ಆಗಸ್ಟ್ 23ರಂದು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಇಳಿಯಲು ಪ್ರಯತ್ನಿಸಲಿದೆ. ಕಾರ್ಯಾಚರಣೆಯ ಈ ಭಾಗ ಅತ್ಯಂತ ಮಹತ್ವದ್ದಾಗಿದ್ದು, ಲ್ಯಾಂಡಿಂಗ್ ಮಾಡ್ಯುಲ್ ಸ್ವತಂತ್ರವಾಗಿ ಚಲಿಸಿ, ಚಂದ್ರನ ಮೇಲೆ ನಿಖರವಾಗಿ ಇಳಿಯುವಂತೆ ಮಾಡುತ್ತದೆ.
ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ಬಳಿಕ, ರೋವರ್ ಪ್ರಗ್ಯಾನ್ ಲ್ಯಾಂಡರ್ ವಿಕ್ರಮ್‌ನಿಂದ ಹೊರಬರಲಿದೆ. ಈ ಗಗನ ನೌಕೆಯು ಚಂದ್ರನ ಮೇಲೆ ಇಳಿದ ನಂತರ ಒಂದು ದಿನ ಕಾರ್ಯ ನಿರ್ವಹಿಸುತ್ತದೆ. ಚಂದ್ರನ ಮೇಲಿನ ಒಂದು ದಿನವು ಭೂಮಿಯ ಮೇಲಿನ 14 ದಿನಗಳಿಗೆ ಸಮಾನವಾಗಿದೆ.
ಇದನ್ನೂ ಓದಿ:ಚಂದ್ರನೆಡೆಗಿನ ಪಯಣದಲ್ಲಿ ನೂತನ ಮೈಲಿಗಲ್ಲು: ಚಂದ್ರನ ಕಕ್ಷೆ ಸೇರ್ಪಡೆಗೆ ಕಾಯುತ್ತಿರುವ ಚಂದ್ರಯಾನ-3