ಶ್ರೀಹರಿಕೋಟಾ (ಆಂಧ್ರ ಪ್ರದೇಶ): ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದಿರುವ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಶೀಘ್ರವೇ ನಿದ್ರೆ ಜಾರಲಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ. ಆದಿತ್ಯ-ಎಲ್1 ಉಡಾವಣೆ ಯಶಸ್ವಿಯಾದ ಬಗ್ಗೆ ಉದ್ದೇಶಿಸಿ ಮಾತನಾಡುತ್ತಿದ್ದಾಗ ಅವರು ಈ ಮಾಹಿತಿ ನೀಡಿದರು.
ಚಂದ್ರಯಾನ 3ರ ರೋವರ್ ಮತ್ತು ಲ್ಯಾಂಡರ್ ಉತ್ತಮವಾಗಿ ಇನ್ನೂ ಕಾರ್ಯನಿರ್ವಹಿಸುತ್ತಿವೆ. ಚಂದ್ರನ ಮೇಲಿನ ರಾತ್ರಿ ಆರಂಭವಾಗಲಿದ್ದು, ಅವುಗಳು ಶೀಘ್ರದಲ್ಲೇ ನಿದ್ರೆಗೆ ಜಾರಲಿವೆ ಎಂದು ಇಸ್ರೋ ಅಧ್ಯಕ್ಷರು ಹೇಳಿದರು. ಅಲ್ಲದೇ, ವೈಜ್ಞಾನಿಕ ಉಪಕರಣಗಳನ್ನು ಹೊಂದಿರುವ ನಮ್ಮ ತಂಡವು ಈಗ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ, ಒಳ್ಳೆಯ ಸುದ್ದಿ ಏನೆಂದರೆ, ರೋವರ್ ಲ್ಯಾಂಡರ್‌ನಿಂದ ಸುಮಾರು 100 ಮೀಟರ್‌ಗಳಷ್ಟು ದೂರ ಚಲಿಸಿದೆ. ಮುಂಬರುವ ಒಂದು ಅಥವಾ ಎರಡು ದಿನಗಳಲ್ಲಿ ಇಬ್ಬರೂ ನಿದ್ರೆಗೆ ಜಾರಲಿದ್ದಾರೆ. ಹೀಗಾಗಿ ಮುಂದಿನ ಪ್ರಕ್ರಿಯೆಗಳನ್ನು ನಾವು ಪ್ರಾರಂಭಿಸಲಿದ್ದೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಆದಿತ್ಯ - ಎಲ್1 ಉಡಾವಣೆ ಯಶಸ್ವಿ: ಗಗನನೌಕೆಗೆ ಶುಭ ಹಾರೈಸೋಣ ಎಂದ ಇಸ್ರೋ ಅಧ್ಯಕ್ಷ.. ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ
ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಗಗನನೌಕೆಯನ್ನು ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಉಡಾಯಿಸಿದ್ದರು. ಇದಾದ 41 ದಿನಗಳ ನಂತರ ಎಂದರೆ, ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಿ ಇತಿಹಾಸ ಸೃಷ್ಟಿಸಿದ್ದರು.
ಈ ಮೂಲಕ ಶತಮಾನಗಳಿಂದಲೂ ಬೆಳಕನ್ನೇ ಕಾಣದ ಈ ಧ್ರುವದ ಮೇಲೆ ಇದೇ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆ ಇಳಿಸಿದ ಹೆಗ್ಗಳಿಕೆ ಭಾರತೀಯ ವಿಜ್ಞಾನಿಗಳಿಗೆ ಸಂದಿದೆ. ಜೊತೆಗೆ ವಿಕ್ರಮ್ ಲ್ಯಾಂಡರ್ನಲ್ಲಿದ್ದ ಪ್ರಜ್ಞಾನ್ ರೋವರ್ ಹೊರಬಂದು ತನ್ನ ಕಾರ್ಯಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಚಂದ್ರಯಾನ-3ರ ಉದ್ದೇಶಗಳನ್ನೂ ಸಾಕಾರಗೊಳಿಸುತ್ತಿದೆ.
ಅಷ್ಟೇ ಅಲ್ಲ, ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ತಮ್ಮಲ್ಲಿರುವ ಅತ್ಯಾಧುನಿಕ ಉಪಕರಣಗಳ ಮೂಲಕ ಹೊಸ-ಹೊಸ ವೈಜ್ಞಾನಿಕ ವಿಷಯಗಳನ್ನು ಅಧ್ಯಯನ ಮಾಡಿ ಪತ್ತೆ ಹಚ್ಚುತ್ತಿವೆ. ಮಂಗಳವಾರವಷ್ಟೇ ದಕ್ಷಿಣ ಧ್ರುವದಲ್ಲಿ ಸಲ್ಫರ್, ಆಮ್ಲಜನಕ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್ ಹಾಗೂ ಸಿಲಿಕಾನ್ ಧಾತುಗಳಿರುವ ಬಗ್ಗೆ ರೋವರ್ ಖಚಿತಪಡಿಸಿತ್ತು. ಅಲ್ಲದೇ, ಗುರುವಾರ ಚಂದ್ರನ ಮೇಲ್ಮೈಯಲ್ಲಿ ಇದೇ ಮೊದಲ ಬಾರಿಗೆ ಪ್ಲಾಸ್ಮಾ ಪರಿಸರದ ಬಗ್ಗೆ ಲ್ಯಾಂಡರ್ನ 'ರಂಭಾ ಎಲ್ಪಿ' ಪೇಲೋಡ್ ಅಧ್ಯಯನ ಮಾಡಿತ್ತು.
ಇದನ್ನೂ ಓದಿ:ಚಂದ್ರನ ದಕ್ಷಿಣ ಧ್ರುವದಲ್ಲಿ ಪ್ಲಾಸ್ಮಾ ವಿರಳ; ರೇಡಿಯೋ ತರಂಗಗಳ ಸಂಪರ್ಕ ಕಷ್ಟವಿಲ್ಲ: ಇಸ್ರೋ ಹೊಸ ಮಾಹಿತಿ