ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿರುವ ಚಂದ್ರಯಾನ-3ರ ಲ್ಯಾಂಡರ್ ಹಾಗೂ ರೋವರ್ ಬಗ್ಗೆ ಇಸ್ರೋ ಶುಕ್ರವಾರ ಹೊಸ ಮಾಹಿತಿ ಹಂಚಿಕೊಂಡಿದೆ. ವಿಕ್ರಮ್ ಲ್ಯಾಂಡರ್‌ನಿಂದ ಹೊರ ಬಂದಿರುವ ರೋವರ್ ಪ್ರಜ್ಞಾನ್ ಸುಮಾರು 8 ಮೀಟರ್‌ಗಳಷ್ಟು ದೂರವನ್ನು ಯಶಸ್ವಿಯಾಗಿ ಕ್ರಮಿಸಿದೆ. ಅದರ ಉಪಕರಣಗಳು ಕಾರ್ಯಾರಂಭಿಸಿವೆ ಎಂದು ಇಸ್ರೋ ಮಾಹಿತಿ ಒದಗಿಸಿದೆ.
"ರೋವರ್ ಚಲನವಲನಗಳನ್ನು ಪರಿಶೀಲಿಸಲಾಗಿದೆ. ರೋವರ್ ಸುಮಾರು 8 ಮೀಟರ್‌ಗಳಷ್ಟು ದೂರವನ್ನು ಯಶಸ್ವಿಯಾಗಿ ಕ್ರಮಿಸಿತು. ಇದರಲ್ಲಿರುವ ಪೇಲೋಡ್‌ಗಳಾದ (ವೈಜ್ಞಾನಿಕ ಸಾಧನಗಳು) ಎಲ್ಐಬಿಎಸ್ (LIBS) ಮತ್ತು ಎಪಿಎಕ್ಸ್ಎಸ್ (APXS) ಕಾರ್ಯಾರಂಭಿಸಿವೆ'' ಎಂದು ಸಂಜೆ ಟ್ವೀಟ್ ಮಾಡಿದೆ. ಮುಂದುವರೆದು, "ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್‌ನಲ್ಲಿನ ಎಲ್ಲ ಪೇಲೋಡ್‌ಗಳೂ ಕಾರ್ಯನಿರ್ವಹಿಸುತ್ತಿವೆ" ಎಂದೂ ತಿಳಿಸಿದೆ.
ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (Alpha Particle X-Ray Spectrometer-APXS) ರಾಸಾಯನಿಕ ಸಂಯೋಜನೆ ಗುರುತಿಸುವ ಗುರಿ ಹೊಂದಿದೆ. ಚಂದ್ರನ ಮೇಲ್ಮೈಯ ಖನಿಜ ಸಂಯೋಜನೆಯನ್ನು ಇದು ಕಂಡುಹಿಡಿಯಲಿದೆ. ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (Laser-Induced Breakdown Spectroscope-LIBS) ಚಂದ್ರನ ಲ್ಯಾಂಡಿಂಗ್ ಪ್ರದೇಶದ ಸುತ್ತಲೂ ಚಂದ್ರನ ಮಣ್ಣು ಮತ್ತು ಬಂಡೆಗಳ ಧಾತುರೂಪದ ಸಂಯೋಜನೆಗಳನ್ನು (Mg, Al, Si, K, Ca, Ti, Fe) ಪತ್ತೆ ಹಚ್ಚಲು ಪ್ರಯತ್ನಿಸುತ್ತದೆ.