ಚಂಡೀಗಢ, ಪಂಜಾಬ್ :ನಾಳೆ ಭಾರತವು ವಿಜ್ಞಾನ ಮತ್ತು ಬಾಹ್ಯಾಕಾಶ ಜಗತ್ತಿನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಿದೆ. ವಾಸ್ತವವಾಗಿ, ನಾಳೆ Chandrayaan 3 ಮಿಷನ್‌ನ ಉಡಾವಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಮಧ್ಯಾಹ್ನ 2:35 ಕ್ಕೆ ಮಾಡಲಿದೆ. ಈ ಐತಿಹಾಸಿಕ ಉಡಾವಣೆಯನ್ನು ತಮ್ಮ ಕಣ್ಣಾರೆ ನೋಡುವವರಲ್ಲಿ ಪಂಜಾಬ್‌ನ ವಿದ್ಯಾರ್ಥಿಗಳೂ ಸೇರಿದ್ದಾರೆ. ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಬೇನ್ಸ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಹರ್ಜೋತ್ ಬೇನ್ಸ್ ಟ್ವೀಟ್:ಶಿಕ್ಷಣ ಸಚಿವ ಹರ್ಜೋತ್ ಬೈನ್ಸ್ ಅವರು ಟ್ವೀಟ್ವೊಂದನ್ನು ಹಂಚಿಕೊಂಡಿದ್ದಾರೆ. ಟ್ವೀಟ್ನಲ್ಲಿ, 'ಗೌರವಾನ್ವಿತ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ದೂರದೃಷ್ಟಿಯ ಕಲ್ಪನೆಯಂತೆ ಸ್ಕೂಲ್ ಆಫ್ ಎಮಿನೆನ್ಸ್ (SOE) ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಯ ಅನುಭವವನ್ನು ಒದಗಿಸಲು ನಾವು ಯೋಜಿಸಿದ್ದೇವೆ. ಹೀಗಾಗಿ ಪಂಜಾಬ್‌ನ ವಿವಿಧ ಜಿಲ್ಲೆಗಳಿಂದ 40 ಎಸ್‌ಒಇ ವಿದ್ಯಾರ್ಥಿಗಳು ಚಂದ್ರಯಾನ 3 ಉಡಾವಣೆಯನ್ನು ವೀಕ್ಷಿಸಲು ಶ್ರೀಹರಿಕೋಟಾಕ್ಕೆ ತೆರಳುತ್ತಿದ್ದಾರೆ. ಈ 3 ದಿನಗಳ ಪ್ರವಾಸದಲ್ಲಿ ಅವರು ಸಂಪೂರ್ಣ ಶ್ರೀಹರಿಕೋಟಾ ಸೌಲಭ್ಯವನ್ನು ನೋಡುತ್ತಾರೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಪ್ರಗತಿಯ ಬಗ್ಗೆ ಅರಿತುಕೊಳ್ಳಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.
23 ಜಿಲ್ಲೆಗಳಿಂದ ವಿದ್ಯಾರ್ಥಿಗಳು ಭಾಗಿ:ಪಂಜಾಬ್‌ನ 23 ಜಿಲ್ಲೆಗಳ ವಿದ್ಯಾರ್ಥಿಗಳು ಈ ತಂಡದಲ್ಲಿದ್ದಾರೆ ಎಂದು ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ತಿಳಿಸಿದ್ದಾರೆ. ಇದು 3 ದಿನಗಳ ಕಾಲ ಪ್ರವಾಸ. ವಿದ್ಯಾರ್ಥಿಗಳು ಅಲ್ಲಿಯೇ ಇರುತ್ತಾರೆ. ಇದರೊಂದಿಗೆ ಶ್ರೀಹರಿಕೋಟಾದಲ್ಲಿ ನಡೆಯುತ್ತಿರುವ ಬಾಹ್ಯಾಕಾಶ ಅಧ್ಯಯನದ ಬಗ್ಗೆಯೂ ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ನೋಡಿ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.