ಬೆಂಗಳೂರು:ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್, ಚಂದ್ರ ಚುಂಬನಕ್ಕೆ ಸಾಕ್ಷಿಯಾಗಿ ನಾಲ್ಕು ಫೋಟೋಗಳನ್ನು ಭೂಮಿಗೆ ರವಾನಿಸಿದೆ. ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರದೊಂದಿಗೆ ವಿಕ್ರಮ್ ಲ್ಯಾಂಡರ್ ಸಂವಹನ ಸಾಧಿಸಿದೆ. ಈ ಫೋಟೋಗಳನ್ನು ಇಸ್ರೋ ತನ್ನ ಅಧಿಕೃತ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
''ಚಂದ್ರಯಾನ 3 ಲ್ಯಾಂಡರ್ ಮತ್ತು ಬೆಂಗಳೂರಿನ MOX-ISTRAC ನಡುವೆ ಸಂವಹನ ಸಂಪರ್ಕ ಸ್ಥಾಪಿಸಲಾಗಿದೆ. ಲ್ಯಾಂಡರ್‌ನ ಹಾರಿಜಾಂಟಲ್ ವೆಲಾಸಿಟಿ ಕ್ಯಾಮರಾದಿಂದ ಚಂದ್ರನ ಅಂಗಳಕ್ಕೆ ಇಳಿಯುವಾಗ ತೆಗೆದ ಚಿತ್ರಗಳು ಇಲ್ಲಿವೆ'' ಎಂದು ಟ್ವೀಟ್ ಮಾಡಿದೆ.
ಯಶಸ್ವಿ ಲ್ಯಾಂಡಿಂಗ್ ಬಳಿಕವೂ ತೆಗೆಯಲಾದ ಮತ್ತೊಂದು ಫೋಟೋವನ್ನು ವಿಕ್ರಮ್ ಲ್ಯಾಂಡರ್ ಭೂಮಿಗೆ ರವಾನಿಸಿದೆ. ಇದು ಲ್ಯಾಂಡಿಂಗ್ ಸೈಟ್‌ನ ಒಂದು ಭಾಗವನ್ನು ತೋರಿಸುತ್ತದೆ. ವಿಕ್ರಮ್ ಲ್ಯಾಂಡ್ ಆದ ಸ್ಥಳದಲ್ಲಿ ಅದರ ಒಂದು ಕಾಲು ಮತ್ತು ಅದರ ಜೊತೆಗಿರುವ ನೆರಳನ್ನು ಫೋಟೋದಲ್ಲಿ ಕಾಣಬಹುದು.
ಅದಕ್ಕೂ ಮುನ್ನ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ವಿಕ್ರಮ್ ಯಶಸ್ವಿಯಾಗಿ ಇಳಿಯುತ್ತಿದ್ದಂತೆ ಟ್ವೀಟ್ ಮಾಡಿ ಖಚಿತಪಡಿಸಿದ ಇಸ್ರೋ, ''ಚಂದ್ರಯಾನ-3 ಮಿಷನ್, ಭಾರತ, ನಾನು ನನ್ನ ಗಮ್ಯಸ್ಥಾನವನ್ನು ತಲುಪಿದೆ ಮತ್ತು ನೀವೂ ಕೂಡ!'' ಎಂದು ಭೂಮಿಗೆ ಸಂದೇಶ ಕಳುಹಿಸಿದೆ.
ಇಡೀ ವಿಶ್ವವೇ ಎದುರು ನೋಡುತ್ತಿದ್ದ ಮಹತ್ವಾಕಾಂಕ್ಷಿ ಚಂದ್ರಯಾನ-3 ಗಗನ ನೌಕೆಯ ಲ್ಯಾಂಡರ್ ವಿಕ್ರಮ್ ಅನ್ನು ಸಂಜೆ 6:04ಕ್ಕೆ ಸರಿಯಾಗಿ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲಾಯಿತು. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಈ ಸಾಧನೆಗೆ ಇಡೀ ಪ್ರಪಂಚದಿಂದ ಶುಭಾಶಯಗಳ ಸುರಿಮಳೆಗಳು ಬರಲಾಂಭಿಸಿವೆ. ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸೆನ್ ಟ್ವೀಟ್ ಮಾಡಿ ಇಸ್ರೋಗೆ ಅಭಿನಂದನೆ ತಿಳಿಸಿದ್ದಾರೆ.
ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿಂದಲೇ ಸಾಫ್ಟ್ ಲ್ಯಾಂಡಿಂಗ್ ವೀಕ್ಷಿಸಿ, ''ಭೂಮಿ ಮೇಲೆ ಸಂಕಲ್ಪ ಮಾಡಿದ್ದನ್ನು ಚಂದ್ರನಲ್ಲಿ ಸಾಕಾರ ಮಾಡಿದ್ದೇವೆ. ಭಾರತ ಈಗ ಚಂದ್ರನ ಮೇಲೆ..'' ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೇ, ''ಭಾರತದ ಚಂದ್ರಯಾನದ ಯಶಸ್ಸು ಇಡೀ ಮಾನವತೆಗೆ ಸೇರಿದೆ. ಇಂತಹ ಐತಿಹಾಸಿಕ ಕ್ಷಣಗಳನ್ನು ನೋಡಿದಾಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಇದು ನವ ಭಾರತದ ಉದಯ'' ಎಂದು ಚಂದ್ರನ ಮೇಲೆ ಲ್ಯಾಂಡರ್ ಇಳಿದ ಮರುಕ್ಷಣವೇ ತಿರಂಗಾ ಧ್ವಜವನ್ನು ತಮ್ಮ ಕೈಯಲ್ಲಿ ಹಿಡಿದು ಸಂತಸಪಟ್ಟರು. ಶೀಘ್ರದಲ್ಲೇ ಬೆಂಗಳೂರಿಗೆ ಭೇಟಿ ನೀಡಿ ಇಡೀ ತಂಡವನ್ನು ವೈಯಕ್ತಿಕವಾಗಿ ಅಭಿನಂದಿಸುವುದಾಗಿಯೂ ಮೋದಿ ಹೇಳಿದ್ದಾರೆ.
ಚಂದ್ರಯಾನ-3 ಯೋಜನೆಯು ಅಭೂತಪೂರ್ವ ಯಶಸ್ಸು ಕಂಡ ಬಳಿಕ ಎಲ್ಲರಿಗೂ ಧನ್ಯವಾದ ತಿಳಿಸಿ ಮಾತನಾಡಿದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಖ್ಯಸ್ಥ ಎಸ್.ಸೋಮನಾಥ್, "ಇನ್ನು ನಾವು ಚಂದ್ರನ ಊರಿನ ಪಯಣಿಗರು. ಶಶಿಯ ಮೇಲೆ ನಮ್ಮ ನೌಕೆ ನಿಂತಿದೆ. ನಾಲ್ಕು ವರ್ಷಗಳ ಶ್ರಮ ಇಂದು ಪ್ರತಿಫಲ ಕಂಡಿತು. ಇದರ ಹಿಂದೆ ಅವಿರತವಾಗಿ ಶ್ರಮಿಸಿದ ಎಲ್ಲ ವಿಜ್ಞಾನಿಗಳಿಗೂ ಧನ್ಯವಾದಗಳು ಮತ್ತು ಅಭಿನಂದನೆಗಳು" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಂದ್ರನ 'ದಕ್ಷಿಣ ಪಥೇಶ್ವರ' ಭಾರತ: ಯಾರೂ ಮುಟ್ಟದ ಜಾಗದಲ್ಲಿ 'ಇಸ್ರೋ' ಹೆಜ್ಜೆಗುರುತು!