ನವದೆಹಲಿ: ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿರುವ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರಯಾನ-2ರ ಆರ್ಬಿಟರ್ ಸೆರೆಹಿಡಿದಿದೆ. ಇದರ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಬಿಡುಗಡೆ ಮಾಡಿದೆ.
ಸೆಪ್ಟೆಂಬರ್ 6ರಂದು ಚಂದ್ರಯಾನ-2 ಆರ್ಬಿಟರ್‌ನಲ್ಲಿ ಡ್ಯುಯಲ್-ಫ್ರೀಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರಾಡಾರ್ (Dual-frequency Synthetic Aperture Radar - DFSAR) ಉಪಕರಣದಿಂದ ಚಂದ್ರಯಾನ-3 ಲ್ಯಾಂಡರ್ನ ಚಿತ್ರವನ್ನು ಸೆರೆಹಿಡಿದಿದೆ ಎಂದು ಇಸ್ರೋ ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟ್ಟರ್)ನಲ್ಲಿ ಪೋಸ್ಟ್ ಮಾಡಿದೆ.
ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಕರಣವು ನಿರ್ದಿಷ್ಟ ತರಂಗಾಂತರ ಬ್ಯಾಂಡ್‌ನಲ್ಲಿ ಸೂಕ್ಷ್ಮ ತರಂಗಗಳನ್ನು ರವಾನಿಸುತ್ತದೆ. ಮೇಲ್ಮೈಯಿಂದ ಚದುರಿದ ಅದೇ ತರಂಗಗಳನ್ನು ಸ್ವೀಕರಿಸುತ್ತದೆ. ಇದೊಂದು ರಾಡಾರ್ ಆಗಿರುವುದರಿಂದ ಸೌರ ಪ್ರಕಾಶವಿಲ್ಲದೆಯೂ ಚಿತ್ರಿಸುತ್ತಿದೆ. ಇದು ಗುರಿಯ ವೈಶಿಷ್ಟ್ಯಗಳ ದೂರ ಮತ್ತು ಭೌತಿಕ ಗುಣಲಕ್ಷಣಗಳನ್ನು ಒದಗಿಸುತ್ತದೆ. ಆದ್ದರಿಂದ ಈ ಸಿಂಥೆಟಿಕ್ ಅಪರ್ಚರ್ ರಾಡಾರ್ ಅನ್ನು ಭೂಮಿ ಮತ್ತು ಇತರ ಆಕಾಶಕಾಯಗಳ ರಿಮೋಟ್ ಸೆನ್ಸಿಂಗ್ಗಾಗಿ ಬಳಸಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.
ಇದನ್ನೂ ಓದಿ:ಚಂದ್ರಯಾನ-3 ಲ್ಯಾಂಡ್ ಆದ ಸ್ಥಳದ ಚಿತ್ರ ಸೆರೆಹಿಡಿದ ನಾಸಾ
ಡಿಎಫ್ಎಸ್ಎಆರ್ ಚಂದ್ರಯಾನ-2 ಆರ್ಬಿಟರ್‌ನಲ್ಲಿರುವ ಪ್ರಮುಖ ವೈಜ್ಞಾನಿಕ ಸಾಧನವಾಗಿದೆ. ಇದು ಎಲ್ ಮತ್ತು ಎಸ್ ಬ್ಯಾಂಡ್‌ಗಳಲ್ಲಿ ಸೂಕ್ಷ್ಮ ತರಂಗಗಳನ್ನು ಬಳಸಿಕೊಳ್ಳುತ್ತದೆ. ಈ ಅತ್ಯಾಧುನಿಕ ಉಪಕರಣವು ಪ್ರಸ್ತುತ ಯಾವುದೇ ಗ್ರಹಗಳ ಕಾರ್ಯಾಚರಣೆಯಲ್ಲಿ ಅತ್ಯುತ್ತಮ ರೆಸಲ್ಯೂಶನ್ ಪೋಲಾರಿಮೆಟ್ರಿಕ್ ಚಿತ್ರಗಳನ್ನು ನೀಡುತ್ತಿದೆ ಎಂದು ಮಾಹಿತಿ ನೀಡಿದೆ.
ದೀರ್ಘವಾದ ರಾಡಾರ್ ತರಂಗಾಂತರವು ಡಿಎಫ್ಎಸ್ಎಆರ್ಅನ್ನು ಕೆಲವು ಮೀಟರ್‌ಗಳವರೆಗೆ ಚಂದ್ರನ ಉಪಮೇಲ್ಮೈ ವೈಶಿಷ್ಟ್ಯಗಳನ್ನು ಅನ್ವೇಷಿಸಲು ಶಕ್ತಗೊಳಿಸುತ್ತದೆ. ಡಿಎಫ್ಎಸ್ಎಆರ್ ಕಳೆದ ನಾಲ್ಕು ವರ್ಷಗಳಿಂದ ಚಂದ್ರನ ಧ್ರುವ ವಿಜ್ಞಾನದ ಮೇಲೆ ಮುಖ್ಯವಾದ ಗಮನಹರಿಸುತ್ತಿದೆ. ಜೊತೆಗೆ ಚಂದ್ರನ ಮೇಲ್ಮೈಯನ್ನು ಚಿತ್ರಿಸುವ ಮೂಲಕ ಉತ್ತಮ ಗುಣಮಟ್ಟದ ದತ್ತಾಂಶವನ್ನು ಒದಗಿಸುತ್ತದೆ ಎಂದು ಇಸ್ರೋ ವಿವರಿಸಿದೆ.
ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಗಗನನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಿತ್ತು. ಇದಾದ 41 ದಿನಗಳ ನಂತರ ಎಂದರೆ, ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಇಳಿದೆ. ಲ್ಯಾಂಡರ್ನಲ್ಲಿದ್ದ ಪ್ರಜ್ಞಾನ್ ರೋವರ್ ಹೊರಬಂದು ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿದೆ. ಚಂದ್ರನ ಮೇಲೆ ರಾತ್ರಿಯಾದ ಕಾರಣ ಸೆಪ್ಟೆಂಬರ್ 3ರಂದು ರೋವರ್ಗೆ ವಿಶ್ರಾಂತಿ ನೀಡಲಾಗಿದೆ.
ಚಂದ್ರಯಾನ-2ರ ಬಾಹ್ಯಾಕಾಶ ನೌಕೆಯನ್ನು 2019ರ ಜುಲೈ 22ರಂದು ಉಡಾವಣೆ ಮಾಡಲಾಗಿತ್ತು. ಅದೇ ವರ್ಷ ಸೆಪ್ಟೆಂಬರ್ 02ರಂದು ಚಂದ್ರನ ಮೇಲೆ ಇಳಿಸುವ ಸಲುವಾಗಿ ಆರ್ಬಿಟರ್‌ನಿಂದ ಲ್ಯಾಂಡರ್ಅನ್ನು ಬೇರ್ಪಡಿಸಲಾಗಿತ್ತು. ಆದರೆ, ಕೊನೆಯ ಹಂತದಲ್ಲಿ ಅದು ಸಂಪರ್ಕವನ್ನು ಕಡೆದುಕೊಂಡಿತ್ತು. ಮತ್ತೊಂದೆಡೆ, ಚಂದ್ರನ ಸುತ್ತ ತನ್ನ ಉದ್ದೇಶಿತ ಕಕ್ಷೆಯಲ್ಲಿ ಇರಿಸಲಾಗಿರುವ ಆರ್ಬಿಟರ್ ಇನ್ನೂ ಕಾರ್ಯ ನಿರ್ವಹಿಸುತ್ತಿದೆ.
ಇದನ್ನೂ ಓದಿ:ನೋಡಿ ಲ್ಯಾಂಡರ್ನ 3-ಡಿ ಚಿತ್ರ; ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಅಧ್ಯಯನ ನಡೆಸಿದ 'ವಿಕ್ರಮ್' ಚಿತ್ರ ಹಂಚಿಕೊಂಡ ಇಸ್ರೋ