ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದಿರುವ ಚಂದ್ರಯಾನ-3ರ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಹೊಸ ಮಾಹಿತಿ ನೀಡಿದೆ. ವಿಕ್ರಮ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸುವ ಮುಂಚೆ ಸೆರೆಹಿಡಿದ ಅಂತಿಮ ಕ್ಷಣಗಳ ಚಿತ್ರಗಳ ವಿಡಿಯೋವನ್ನು ಇಸ್ರೋ ಹಂಚಿಕೊಂಡಿದೆ.
''ಚಂದ್ರಯಾನ -3 ಮಿಷನ್‌ನ ಎಲ್ಲ ಚಟುವಟಿಕೆಗಳು ಸರಿಯಾಗಿ ಸಾಗುತ್ತಿವೆ'' ಎಂದು ಇಸ್ರೋ ಟ್ವೀಟ್ ಮಾಡಿದೆ. ಲ್ಯಾಂಡರ್ ಮಾಡ್ಯೂಲ್ ಉಪಕರಣಗಳಾದ ಎಲ್ಐಎಸ್ಎ (ILSA), ರಂಭಾ (RAMBHA) ಮತ್ತು ಚೇಸ್ಟ್ (ChaSTE) ಕಾರ್ಯಾರಂಭ ಮಾಡಿವೆ. ರೋವರ್ ಮೊಬಿಲಿಟಿ ಕಾರ್ಯಾಚರಣೆಗಳೂ ಸಹ ಪ್ರಾರಂಭವಾಗಿವೆ'' ಎಂದು ತಿಳಿಸಿದೆ. ಇದೇ ವೇಳೆ, ಪ್ರೊಪಲ್ಷನ್ ಮಾಡ್ಯೂಲ್‌ನಲ್ಲಿನ ಶೇಪ್ (SHAPE) ಪೇಲೋಡ್ ಭಾನುವಾರ ಆರಂಭವಾಗಲಿದೆ'' ಎಂದು ಇಸ್ರೋ ಮಾಹಿತಿ ನೀಡಿದೆ.
ಇದನ್ನೂ ಓದಿ:Chandrayaan 3: ಕೌತುಕದಿಂದ ಕೂಡಿರುವ ಚಂದ್ರನ ದಕ್ಷಿಣ ತುದಿಯನ್ನೇ ಇಸ್ರೋ ಆಯ್ಕೆ ಮಾಡಿಕೊಂಡಿದ್ದೇಕೆ? ವೈಜ್ಞಾನಿಕ ಕಾರಣ ನೀಡಿದ ಮುಖ್ಯಸ್ಥ
ಮತ್ತೊಂದು ಟ್ವೀಟ್ನಲ್ಲಿ, ''ಚಂದ್ರನನ್ನು ಸ್ಪರ್ಶಿಸುವ ಸ್ವಲ್ಪ ಸಮಯಕ್ಕೂ ಮೊದಲು ಲ್ಯಾಂಡರ್ ಇಮೇಜರ್ ಕ್ಯಾಮರಾ ಚಂದ್ರನ ಚಿತ್ರವನ್ನು ಹೇಗೆ ಸೆರೆಹಿಡಿದಿದೆ ಎಂಬುದು ಇಲ್ಲಿದೆ'' ಎಂದು ವಿಡಿಯೋ ತುಣುಕನ್ನು ಇಸ್ರೋ ಪೋಸ್ಟ್ ಮಾಡಿದೆ.
ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಚಂದ್ರಯಾನ-3 ಗಗನನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಿತ್ತು. ಇದಾದ ನಂತರ 41 ದಿನಗಳ ನಂತರ, ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಸುರಕ್ಷಿತ ಹಾಗೂ ಮೃದುವಾಗಿ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸಿದ ಇಸ್ರೋ ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಅಮೆರಿಕ, ಚೀನಾ ಹಾಗೂ ರಷ್ಯಾ ನಂತರ ಚಂದ್ರನ ಮೇಲೆ ಇಳಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಅದರಲ್ಲೂ, ಭಾರತ ಇಳಿದಿರುವ ದಕ್ಷಿಣ ಧ್ರುವವು ಇಡೀ ಜಗತ್ತಿನ ಗಮನ ಸೆಳೆದಿದೆ. ಯಾಕೆಂದರೆ, ದಕ್ಷಿಣ ಧ್ರುವವು ಸಂಕೀರ್ಣತೆಗಳಿಂದ ಕೂಡಿದ್ದು, ಇಲ್ಲಿನ ಗಗನನೌಕೆ ಇಳಿಸುವುದು ಸುಲಭವಾಗಿರಲಿಲ್ಲ. ಇತ್ತೀಚೆಗೆ ಭಾರತಕ್ಕೂ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಲು ಯೋಜಿಸಿದ್ದ ರಷ್ಯಾ ಕೊನೆ ಕ್ಷಣದಲ್ಲಿ ವಿಫಲವಾಗಿತ್ತು. ಚಂದ್ರನಲ್ಲಿಗೆ ಹಾರಿಬಿಡಲಾಗಿದ್ದ ಲೂನಾ-25 ಬಾಹ್ಯಾಕಾಶ ನೌಕೆಯು ಆಗಸ್ಟ್ 21ರಂದು ತಾಂತ್ರಿಕ ಸಮಸ್ಯೆಗೆ ತುತ್ತಾಗಿ ಚಂದ್ರನ ಮೇಲೆ ಅಪ್ಪಳಿಸಿತ್ತು. ಆದ್ದರಿಂದ ಚಂದ್ರದ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ರಾಷ್ಟ್ರ ಎಂಬ ಕೀರ್ತಿಗೂ ಭಾರತ ಪಾತ್ರವಾಗಿದೆ. ಈ ದಕ್ಷಿಣ ಧ್ರುವವು ನೀರಿನ ಕುರುಹುಗಳನ್ನು ಹೊಂದಿರಬಹುದು ಎಂಬ ವಿಜ್ಞಾನಿಗಳು ಊಹಿಸಿದ್ದಾರೆ. ಇದನ್ನು ಅನ್ವೇಷಿಸಲು ನೆರವಾಗುವ ವಿಶ್ವಾಸವನ್ನು ವಿಜ್ಞಾನಿಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ:ಶತಕೋಟಿ ವರ್ಷಗಳಿಂದ ಸೂರ್ಯನ ಬೆಳಕನ್ನೇ ಕಾಣದ ಚಂದ್ರನ ದಕ್ಷಿಣ ಧ್ರುವ!