ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್ಪುರ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ಇವರ ಎದುರಾಳಿಯಾಗಿ ಭೀಮ್ ಆರ್ಮಿ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಸ್ಪರ್ಧೆ ಮಾಡುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಜೊತೆ ಮೈತ್ರಿ ವಿಷಯಕ್ಕೆ ಸಂಬಂಧಿಸಿದಂತೆ ಚಂದ್ರಶೇಖರ್ ಆಜಾದ್ ಮಾತುಕತೆ ನಡೆಸಿದ್ದರು. ಆದರೆ, ಮೈತ್ರಿ ಯಶಸ್ವಿಯಾಗದ ಕಾರಣ ಇದೀಗ ಆಜಾದ್ ಸಮಾಜ್ ಪಾರ್ಟಿ 33 ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿದ್ದು, ಗೋರಖ್ಪುರ ಕ್ಷೇತ್ರದಿಂದ ಚಂದ್ರಶೇಖರ್ ಆಜಾದ್ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದೇ ಮೊದಲ ಸಲ ವಿಧಾನಸಭೆ ಚುನಾವಣೆಗಿಳಿದಿರುವ ಆಜಾದ್ ಅತಿದೊಡ್ಡ ಅಗ್ನಿ ಪರೀಕ್ಷೆಗೊಳಪಡಲಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಯೋಗಿ-ಆಜಾದ್ ಮೊದಲ ಫೈಟ್
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಹಾಗೂ ಚಂದ್ರಶೇಖರ್ ಆಜಾದ್ ಇದೇ ಮೊದಲ ಸಲ ಸ್ಪರ್ಧೆ ಮಾಡಿದ್ದಾರೆ. ಈಗಾಗಲೇ ಐದು ಸಲ ಸಂಸದರಾಗಿರುವ ಸಿಎಂ ಯೋಗಿ ಮೊದಲ ಬಾರಿಗೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.