ಚಂಡೀಗಢ: ಹರಿಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಚಂಡೀಗಢ ಪೊಲೀಸರು ರಾಷ್ಟ್ರೀಯ ಅಥ್ಲೀಟ್ ಮತ್ತು ಜೂನಿಯರ್ ಮಹಿಳಾ ಕೋಚ್ ನೀಡಿದ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆ (ಐಪಿಸಿ)ಯ ವಿವಿಧ ಸೆಕ್ಷನ್‌ಗಳಡಿ ಪ್ರಥಮ ವರ್ತಮಾನ ವರದಿ(ಎಫ್‌ಐಆರ್) ದಾಖಲಿಸಿದ್ದಾರೆ.
ರಾಷ್ಟ್ರೀಯ ಅಥ್ಲೀಟ್ ಮತ್ತು ಜೂನಿಯರ್ ಕೋಚ್‌ವೊಬ್ಬರು, ಸಂದೀಪ್ ಸಿಂಗ್ ನನ್ನನ್ನು ತಮ್ಮ ನಿವಾಸಕ್ಕೆ ಕರೆಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಚಂಡೀಗಢ ಸೆಕ್ಟರ್-26 ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354, 354ಎ, 354ಬಿ, 342 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸಂದೀಪ್ ಸಿಂಗ್ ಇನ್‌ಸ್ಟಾಗ್ರಾಮ್ ಮೂಲಕ ನನ್ನನ್ನು ಸಂಪರ್ಕಿಸಿದ್ದರು. ನಾನು ಅವರ ಮಾತನ್ನು ಕೇಳಿದರೆ ನನಗೆ ಎಲ್ಲಾ ಸೌಲ್ಯಭ್ಯಗಳು ಮತ್ತು ಪೋಸ್ಟಿಂಗ್ ಬಯಸಿದ ಸ್ಥಳದಲ್ಲಿ ಸಿಗುತ್ತದೆ ಎಂದು ಹೇಳಿದ್ದರು. ಆದರೆ ನಾನು ಇದಕ್ಕೆ ಒಪ್ಪದಿದ್ದಾಗ ನನ್ನನ್ನು ವರ್ಗಾವಣೆ ಮಾಡಿ ತರಬೇತಿಯನ್ನೂ ನಿಲ್ಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.