ತಿರುವನಂತಪುರಂ : ಭಾರತೀಯ ರೈಲ್ವೆಯ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ ಲಿಮಿಟೆಡ್ (Indian Railway Catering and Tourism Corporation Limited -IRCTC) 12 ದಿನಗಳ ಕಾಲದ ಗೋಲ್ಡನ್ ಟ್ರಯಾಂಗಲ್ ಹೆಸರಿನ ಟೂರ್ ಪ್ಯಾಕೇಜ್ ಆರಂಭಿಸಿದೆ. ಈ ಪ್ಯಾಕೇಜ್ನಲ್ಲಿ ವಿಶ್ವದ ಅತಿದೊಡ್ಡ ಫಿಲ್ಮ್ ಸ್ಟುಡಿಯೋ ಸಂಕೀರ್ಣವಾದ ರಾಮೋಜಿ ಫಿಲಂ ಸಿಟಿಗೆ ಭೇಟಿ ನೀಡುವ ಅವಕಾಶವೂ ಇದೆ. ಕೇರಳದಿಂದ ಆರಂಭವಾಗುವ ಈ ಟೂರ್ ಪ್ಯಾಕೇಜ್ಗೆ 23,000 ರೂಪಾಯಿ ದರ ನಿಗದಿಪಡಿಸಲಾಗಿದೆ. ಹೊಸ ಸೇವೆಯು ಭಾರತ್ ಗೌರವ್ ಟೂರಿಸ್ಟ್ ಟ್ರೇನ್ ಪ್ಯಾಕೇಜ್‌ನ ಭಾಗವಾಗಿದೆ.
ಪ್ಯಾಕೇಜ್ 12 ದಿನಗಳಲ್ಲಿ ಚಾರ್ಮಿನಾರ್, ಸಾಲಾರ್ ಜಂಗ್ ಮ್ಯೂಸಿಯಂ, ಗೋಲ್ಕೊಂಡ ಕೋಟೆ, ತಾಜ್ಮಹಲ್, ಆಗ್ರಾ ಅರಮನೆ, ಕೆಂಪು ಕೋಟೆ, ರಾಜ್ ಘಾಟ್, ಲೋಟಸ್ ಟೆಂಪಲ್, ಕುತುಬ್ ಮಿನಾರ್, ಜೈಪುರ ಸಿಟಿ ಪ್ಯಾಲೇಸ್, ಜಂತರ್ ಮಂತರ್, ಹವಾ ಮಂಜಿಲ್, ಗೋವಾದ ಕಲ್ಲಂಗೋಟ್ ಬೀಚ್, ವಾಗಾತೋರ್ ಬೀಚ್, ಬಾಮ್ ಜೀಸಸ್ ಕ್ಯಾಥೆಡ್ರಲ್ನ ಬೆಸಿಲಿಕಾ ಈ ಎಲ್ಲ ಸ್ಥಳಗಳನ್ನು ಪ್ರವಾಸಿಗರಿಗೆ ದರ್ಶನ ಮಾಡಿಸುತ್ತದೆ.
ಈ ರೈಲು ತಿರುವನಂತಪುರಂನ ಕೊಚುವೇಲಿಯಿಂದ ಹೊರಟು ಹೈದರಾಬಾದ್, ಆಗ್ರಾ, ದೆಹಲಿ, ಜೈಪುರ, ಗೋವಾಗಳಿಗೆ ಭೇಟಿ ನೀಡಿ ಹಿಂತಿರುಗುತ್ತದೆ. 11 ರಾತ್ರಿ ಮತ್ತು 12 ದಿನಗಳ ಕಾಲ ನಡೆಯುವ ಈ ಪ್ರವಾಸದಲ್ಲಿ ಪ್ರವಾಸಿಗರು 6475 ಕಿ.ಮೀ ಕ್ರಮಿಸಬಹುದು. ಪ್ರವಾಸವು ಮೇ 19 ರಂದು ಆರಂಭವಾಗಲಿದೆ. ಮೇ 30 ರಂದು ಮುಗಿಯಲಿದೆ. ಈ ಪ್ರವಾಸಿ ರೈಲಿನಲ್ಲಿ ಸ್ಲೀಪರ್ ಕ್ಲಾಸ್ ಮತ್ತು ಥ್ರೀ ಟಯರ್ ಎಸಿ ಕ್ಲಾಸ್ಗಳಿವೆ. ನಾನ್ - ಎಸಿ ಕ್ಲಾಸ್ ಪ್ರಯಾಣವನ್ನು ಸ್ಟ್ಯಾಂಡರ್ಡ್ ಕೆಟಗರಿ ಎಂದು ಹೆಸರಿಸಲಾಗಿದೆ ಮತ್ತು ಎಸಿ ಕ್ಲಾಸ್ ಪ್ರಯಾಣವನ್ನು ಕಂಫರ್ಟ್ ಕೆಟಗರಿ ಎಂದು ಹೆಸರಿಸಲಾಗಿದೆ.
ಸ್ಟ್ಯಾಂಡರ್ಡ್ ಕ್ಲಾಸ್ ಪ್ರಯಾಣಕ್ಕೆ 22,000 ಮತ್ತು ಕಂಫರ್ಟ್ ಕ್ಲಾಸ್ ಪ್ರಯಾಣಕ್ಕೆ 36,050 ರೂಪಾಯಿ ದರ ನಿಗದಿಪಡಿಸಲಾಗಿದೆ. ಪ್ರಯಾಣ ದರವು ವಸತಿ, ಸಸ್ಯಾಹಾರಿ ಊಟ ಮತ್ತು ಪ್ರವಾಸಿ ತಾಣಗಳಿಗೆ ಬಸ್ ಪ್ರಯಾಣದ ವೆಚ್ಚವನ್ನು ಒಳಗೊಂಡಿದೆ. ಪ್ರತಿ ಕಂಪಾರ್ಟ್‌ಮೆಂಟ್‌ನಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿರುತ್ತದೆ. ಇದಲ್ಲದೇ, ವೈದ್ಯಕೀಯ ನೆರವು ಬೇಕಾದ ಸಂದರ್ಭ ಎದುರಾದರೆ ಐಆರ್ಸಿಟಿಸಿ ಪ್ರಯಾಣಿಕರಿಗೆ ಸಂಪೂರ್ಣ ವಿಮಾ ರಕ್ಷಣೆಯನ್ನು ಸಹ ಒದಗಿಸಿದೆ. ಆಯಾ ಪ್ರವಾಸಿ ಸ್ಥಳಗಳಲ್ಲಿ ಅನ್ವಯವಾಗುವ ಪ್ರವೇಶ ಶುಲ್ಕವನ್ನು ಪ್ರಯಾಣಿಕರೇ ಭರಿಸಬೇಕು. 5 ರಿಂದ 11 ವರ್ಷ ವಯೋಮಾನದ ಮಕ್ಕಳಿಗೆ ಸ್ಟ್ಯಾಂಡರ್ಡ್ ವಿಭಾಗದಲ್ಲಿ 21,330 ರೂಪಾಯಿ ಹಾಗೂ ಕಂಫರ್ಟ್ ವಿಭಾಗದಲ್ಲಿ 34,160 ರೂಪಾಯಿ ದರ ನಿಗದಿಪಡಿಸಲಾಗಿದೆ.
ಐಆರ್ಸಿಟಿಸಿ ವೆಬ್‌ಸೈಟ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಇದಲ್ಲದೆ ಪ್ರಯಾಣಿಕರು ತಿರುವನಂತಪುರಂ, ಎರ್ನಾಕುಲಂ ಮತ್ತು ಕೋಯಿಕ್ಕೋಡ್‌ನಲ್ಲಿರುವ ಐಆರ್ಸಿಟಿಸಿ ಬುಕಿಂಗ್ ಕೌಂಟರ್‌ಗಳ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದು. ಈ ರೈಲಿನಲ್ಲಿ 750 ಪ್ರವಾಸಿಗರು ಪ್ರಯಾಣಿಸಲು ಅವಕಾಶವಿದೆ. ಸ್ಟ್ಯಾಂಡರ್ಡ್ ಕ್ಲಾಸ್‌ನಲ್ಲಿ 544 ಸೀಟುಗಳು ಮತ್ತು ಕಂಫರ್ಟ್ ಕ್ಲಾಸ್‌ನಲ್ಲಿ 206 ಸೀಟುಗಳಿವೆ. ಪ್ರಸ್ತುತ ಪ್ಯಾಕೇಜ್ ಟೂರ್ಗೆ ಟಿಕೆಟ್ ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಕೊಚುವೇಲಿಯಿಂದ ಪ್ರಾರಂಭಿಸಿ, ಪ್ರಯಾಣಿಕರು ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ ಟೌನ್, ತ್ರಿಶೂರ್, ಒಟ್ಟಪಾಲಂ, ಪಾಲಕ್ಕಾಡ್ ಜಂಕ್ಷನ್, ಪೊಡನ್ನೂರ್ ಜಂಕ್ಷನ್, ಈರೋಡ್ ಜಂಕ್ಷನ್ ಮತ್ತು ಸೇಲಂನಿಂದ ರೈಲು ಹತ್ತಬಹುದು.
ಮರಳಿ ಬರುವಾಗ ಪ್ರವಾಸಿಗರು ಕಣ್ಣೂರು, ಕೋಯಿಕ್ಕೋಡ್, ಶೋರ್ನೂರ್, ತ್ರಿಶೂರ್, ಎರ್ನಾಕುಲಂ ಟೌನ್, ಕೊಟ್ಟಾಯಂ ಮತ್ತು ಕೊಲ್ಲಂ ಸ್ಟೇಶನ್ಗಳಲ್ಲಿ ಇಳಿದುಕೊಳ್ಳಬಹುದು. ಭಾರತ್ ಗೌರವ್ ರೈಲು ಪ್ರವಾಸ ಪ್ಯಾಕೇಜ್‌ನ ಭಾಗವಾಗಿ ತಿರುವನಂತಪುರಂ ಕೊಚುವೇಲಿಯಿಂದ ಪ್ರತಿ ತಿಂಗಳು ವಿಶೇಷ ರೈಲನ್ನು ಓಡಿಸಲು ಐಆರ್ಸಿಟಿಸಿ ತಯಾರಿ ನಡೆಸುತ್ತಿದೆ.
ಇದನ್ನೂ ಓದಿ:ಫೋನ್ ಬಿಟ್ಟಿರಲು ಆಗಲ್ವಾ? ಹಾಗಾದ್ರೆ ನಿಮಗೂ ನೋಮೋಫೋಬಿಯಾ ಇರಬಹುದು!