ನವದೆಹಲಿ:ಉತ್ತರಾಖಂಡದ ಕೇದಾರನಾಥದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸೋದರ ಸಂಬಂಧಿ, ಬಿಜೆಪಿ ಸಂಸದರೂ ಆಗಿರುವ ವರುಣ್ ಗಾಂಧಿ ನಡುವಿನ ಭೇಟಿಯನ್ನು ಕಾಂಗ್ರೆಸ್ 'ಇದೊಂದು ಆಕಸ್ಮಿಕ' ಎಂದು ಹೇಳಿದೆ. ಕೇದಾರನಾಥದಲ್ಲಿ ಇಬ್ಬರು 'ಗಾಂಧಿ'ಗಳ ಮುಖಾಮುಖಿಯ ನಂತರ ರಾಜಕೀಯ ಚರ್ಚೆಗಳು ತೀವ್ರತೆ ಪಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರು ಹೇಳಿಕೆ ನೀಡಿದ್ದು, ಇಬ್ಬರ ಭೇಟಿ ಆಕಸ್ಮಿಕವಾಗಿದೆ. ಇದರ ಹಿಂದೆ ಯಾವುದೇ ರಾಜಕೀಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಚರ್ಚೆ ಹುಟ್ಟುಹಾಕಿದ ಭೇಟಿ:ಬಿಜೆಪಿ ಸಂಸದರಾಗಿರುವ ವರುಣ್ ಗಾಂಧಿ ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದು, ಸಭೆಗಳಿಂದ ದೂರ ಉಳಿದು ಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕುತ್ತಿರುತ್ತಾರೆ. ಅವರ ತಾಯಿ ಮನೇಕಾ ಗಾಂಧಿ ಅವರು ಕೂಡ ಪಕ್ಷದ ಸಭೆಗಳಿಂದ ವಿಮುಖರಾಗಿದ್ದಾರೆ. ವರುಣ್ ಬಿಜೆಪಿ ತೊರೆದು ಬೇರೆ ಪಕ್ಷ ಸೇರಲಿದ್ದಾರೆ ಎಂಬ ಊಹಾಪೋಹ ಕೇಳಿಬಂದಿದೆ. ಇಂತಿಪ್ಪ, ನವೆಂಬರ್ 7 ರಂದು ಉತ್ತರಾಖಂಡದ ಕೇದಾರನಾಥದಲ್ಲಿ ರಾಹುಲ್ ಮತ್ತು ವರುಣ್ ನಡುವಿನ ಭೇಟಿಯು ವದಂತಿಗೆ ತುಪ್ಪ ಸುರಿದಂತಾಗಿದೆ.
ರಾಹುಲ್ ಗಾಂಧಿ ಅವರು ಕೇದಾರನಾಥಕ್ಕೆ ಮೂರು ದಿನಗಳ ಪ್ರವಾಸದಲ್ಲಿದ್ದು, ಇದೇ ವೇಳೆ ವರುಣ್ ಗಾಂಧಿ ಅವರು ತಮ್ಮ ಪತ್ನಿ ಮತ್ತು ಪುತ್ರಿಯೊಂದಿಗೆ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನದಲ್ಲಿ ಸೋದರಸಂಬಂಧಿಗಳು ಪರಸ್ಪರ ಮಾತುಕತೆ ನಡೆಸಿದ್ದರು. ಈ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ.
ಸೂಕ್ತ ವೇದಿಕೆಯಲ್ಲಿ ಚರ್ಚೆ:ಕಾಂಗ್ರೆಸ್ ಹಿರಿಯ ನಾಯಕ ಪಿಎಲ್ ಪುನಿಯಾ ಈಟಿವಿ ಭಾರತ್ ಜೊತೆ ಮಾತನಾಡಿ, ಇಬ್ಬರ ಭೇಟಿ ಆಕಸ್ಮಿಕವಾಗಿದೆ ಎಂದು ಭಾವಿಸುತ್ತೇನೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಆದರೆ, ಏನಾದರೂ ಚರ್ಚಿಸಬೇಕಾದರೆ ಸೂಕ್ತವಾದ ಸ್ಥಳ, ವೇದಿಕೆಯಲ್ಲಿ ಮಾಡಬಹುದು. ಧಾರ್ಮಿಕ ಸ್ಥಳವನ್ನು ಆಯ್ಕೆ ಮಾಡುತ್ತಿರಲಿಲ್ಲ. ವರುಣ್ ಅವರು ಸರ್ಕಾರದ ವಿರುದ್ಧ ಟೀಕಿಸುತ್ತಿರುವುದು ಪಕ್ಷ ಬದಲಾವಣೆಯ ಊಹಾಪೋಹಗಳಿಗೆ ಕಾರಣವಾಗಿದೆ. ಅವರ ಸೇರ್ಪಡೆ ಬಗ್ಗೆ ಗಾಂಧಿ ಕುಟುಂಬ ಮಾತ್ರ ನಿರ್ಧರಿಸಬಹುದು ಎಂದು ಹೇಳಿದ್ದಾರೆ.