ನವದೆಹಲಿ:ಕೋವಿಡ್ ಲಸಿಕಾ ಅಭಿಯಾನದ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಬದಲು ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದೆ ಎಂದುವೈದ್ಯರು ಮತ್ತು ವಿಜ್ಞಾನಿಗಳ ರಾಷ್ಟ್ರೀಯ ಸಂಘ ಆರೋಪಿಸಿದೆ.
ಲಸಿಕೆಯನ್ನು ಮಾರುಕಟ್ಟೆಯಲ್ಲಿ ಸಿಗುವಂತೆ ಮಾಡಿರುವ ಕೇಂದ್ರದ ಸರ್ಕಾರದ ನಡೆಯು ಖಾಸಗಿ ಕಂಪನಿಗಳಿಗೆ ಲಾಭ ಹೆಚ್ಚಿಸಿಕೊಡುವ ರೀತಿಯಲ್ಲಿದೆ ಎಂದು ಪ್ರೋಗ್ರೆಸಿವ್ ಮೆಡಿಕೋಸ್ ಆ್ಯಂಡ್ ಸೈಂಟಿಸ್ಟ್ ಫೋರಂ ಹೇಳಿಕೆ ನೀಡಿದೆ.
ಜನರಿಗೆ ಅನುಕೂಲವಲ್ಲ, ಖಾಸಗಿಗೆ ಲಾಭ
ಎಲ್ಲಾ ರೀತಿಯ ಲಸಿಕೆಗಳ ಶೇ.50 ರಷ್ಟು ಮುಕ್ತ ಮಾರುಕಟ್ಟೆಯ ಮೂಲಕ ಮಾರಲು ಅವಕಾಶ ಅನುಮತಿ ನೀಡಿ ಘೋಷಣೆ ಮಾಡುವ ಮೂಲಕ ಸರ್ಕಾರ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಬದಲು, ಇದರಲ್ಲೂ ಹಣಕಾಸಿನ ಲೆಕ್ಕಾಚಾರ ಹಾಕಿ ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡಲು ಮುಂದಾಗಿದೆ. ಲಸಿಕೆಯನ್ನು ಉಚಿತವಾಗಿ ವಿತರಿಸುತ್ತೇವೆ ಎಂಬ ಭರವಸೆಗಳು ಕೇವಲ ಚುನಾವಣೆ ಗೆಲ್ಲಲು ಮತ್ತು ಬಳಿಕ ಮರೆತು ಬಿಡಲು ಮಾತ್ರ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಲಸಿಕೆ ಪಡೆಯಲು ಚೌಕಾಸಿ ಸರಿಯೇ?
ಈಗಾಗಲೇ ದೇಶದಲ್ಲಿ ಲಸಿಕೆ ಕೊರತೆ ಇರುವಾಗ, ಕೇಂದ್ರ ಸರ್ಕಾರದ ನಿರ್ಧಾರದಿಂದ ರಾಜ್ಯಗಳು ತಮ್ಮ ಮಟ್ಟದಲ್ಲಿ ಲಸಿಕೆ ಪಡೆಯಲು ಉತ್ತಮ ಬೆಲೆಗಾಗಿ ತಯಾರಕರೊಂದಿಗೆ ಚೌಕಾಸಿ ಮಾಡಬೇಕಾಗುತ್ತದೆ. ಅಲ್ಲದೆ ಲಸಿಕೆ ಪಡೆಯಲು ಒಂದು ರೀತಿ ಹರಾಜು ಕಾರ್ಯ ಮಾಡಬೇಕಾಗುತ್ತದೆ. ಇದರಿಂದ ಲಸಿಕೆಯ ಬೇಡಿಕೆಯ ಗುರಿ ತಲುಪಲು ಸಾಧ್ಯವಾಗುವುದಿಲ್ಲ ಎಂದು ವೈದ್ಯಕೀಯ ಸಂಘ ಕಳವಳ ವ್ಯಕ್ತಪಡಿಸಿದೆ.
ಸಾರ್ವಜನಿಕ ವ್ಯವಸ್ಥೆಯ ಮೂಲಕ ನ್ಯಾಯಯುತ ಬೆಲೆಗೆ ಜನರಿಗೆ ಲಸಿಕೆ ಸಿಗುವಂತೆ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಸರ್ಕಾರದ ನಿರ್ಧಾರವೇನು?
ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಕೋವಿಡ್ ವಿರುದ್ಧ ಲಸಿಕೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ. ಅಲ್ಲದೆ ರಾಜ್ಯಗಳು, ಖಾಸಗಿ ಆಸ್ಪತ್ರೆಗಳು ಮತ್ತು ಕೈಗಾರಿಕಾ ಸಂಸ್ಥೆಗಳು ನೇರವಾಗಿ ಉತ್ಪಾದಕರಿಂದ ಲಸಿಕೆ ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿದೆ.
ಮುಂದಿನ ತಿಂಗಳು ಪ್ರಾರಂಭವಾಗುವ ರಾಷ್ಟ್ರೀಯ ಲಸಿಕೆ ಅಭಿಯಾನದ 3ನೇ ಹಂತದ ಅಡಿಯಲ್ಲಿ, ಲಸಿಕೆ ತಯಾರಕರು ಮಾಸಿಕ ಶೇ.50 ರಷ್ಟು ಲಸಿಕೆಯನ್ನು ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿ (ಸಿಡಿಎಲ್) ಪೂರೈಸಬೇಕು ಮತ್ತು ಉಳಿದ ಶೇ.50 ಲಸಿಕೆಯನ್ನು ರಾಜ್ಯಗಳಿಗೆ ನೀಡಬಹುದು ಅಥವಾ ಮುಕ್ತ ಮಾರುಕಟ್ಟೆಯಲ್ಲಿ ಮಾರಬಹುದು.