ನವದೆಹಲಿ:ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳು ಮತ್ತು ಪಾಲಿಕ್ಲಿನಿಕ್ಗಳಲ್ಲಿ ಜೆನೆರಿಕ್ ಔಷಧಿಗಳನ್ನು ಮಾತ್ರ ನೀಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಖಾಸಗಿ ಕಂಪನಿಗಳ ಔಷಧಿಯನ್ನು ಇಲ್ಲಿಗೆ ಬರುವ ರೋಗಿಗಳಿಗೆ ಶಿಫಾರಸು ಮಾಡಬಾರದು. ಒಂದು ವೇಳೆ ನಿಯಮ ಮೀರಿದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಸರ್ಕಾರಿ ಸ್ವಾಮ್ಯದಲ್ಲಿ ನಡೆಯುವ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ (ಸಿಜಿಎಚ್‌ಎಸ್) ಆರೋಗ್ಯ ಕೇಂದ್ರಗಳ ವೈದ್ಯರು ಜೆನೆರಿಕ್ ಔಷಧವನ್ನು ಮಾತ್ರ ರೋಗಿಗಳಿಗೆ ಸೂಚಿಸಬೇಕು. ಆಸ್ಪತ್ರೆಗಳಿಗೆ ವೈದ್ಯಕೀಯ ಪ್ರತಿನಿಧಿಗಳ (ಔಷಧ ಕಂಪನಿಗಳ ಪ್ರತಿನಿಧಿಗಳು) ಭೇಟಿಯನ್ನು ನಿಷೇಧಿಸಲಾಗಿದೆ. ಹಾಗೊಂದು ವೇಳೆ ಬರುತ್ತುದ್ದರೆ, ಅದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ವೈದ್ಯರಿಗೆ ಸಲಹೆ ನೀಡಿದೆ.
ಸರ್ಕಾರದ ಆದೇಶದಂತೆ ಸರ್ಕಾರಿ ಆಸ್ಪತ್ರೆಗಳು, ಸಿಜಿಎಚ್‌ಎಸ್ ಆರೋಗ್ಯ ಕೇಂದ್ರಗಳು ಮತ್ತು ಪಾಲಿಕ್ಲಿನಿಕ್‌ಗಳ ವೈದ್ಯರು ಕಾಲಕಾಲಕ್ಕೆ ಜೆನೆರಿಕ್ ಔಷಧಿಗಳನ್ನು ಮಾತ್ರ ನೀಡುವಂತೆ ಸೂಚನೆ ನೀಡಲಾಗಿದೆ. ಈ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ ಅತುಲ್ ಗೋಯೆಲ್ ಆದೇಶದಲ್ಲಿ ಎಚ್ಚರಿಸಿದ್ದಾರೆ.
ಡೈರೆಕ್ಟರ್ ಜನರಲ್ ಹೆಲ್ತ್ ಸರ್ವಿಸಸ್ (ಡಿಜಿಎಚ್‌ಎಸ್) ಹೊರಡಿಸಿದ ಆದೇಶದಂತೆ, ಕೇಂದ್ರ ಸರ್ಕಾರಿ ಆಸ್ಪತ್ರೆಗಳು/ ಸಿಜಿಹೆಚ್‌ಎಸ್ ವೆಲ್‌ನೆಸ್ ಸೆಂಟರ್/ ಪಾಲಿಕ್ಲಿನಿಕ್‌ನ ಎಲ್ಲಾ ವೈದ್ಯರು ಕಾಲಕಾಲಕ್ಕೆ ಜೆನೆರಿಕ್ ಔಷಧಿಗಳನ್ನು ಮಾತ್ರ ಶಿಫಾರಸು ಮಾಡಲು ಸೂಚಿಸಲಾಗಿದೆ. ಆದರೆ, ಕೆಲವು ಸಂದರ್ಭಗಳಲ್ಲಿ ವೈದ್ಯರು ಖಾಸಗಿ ಕಂಪನಿಗಳ ಔಷಧಿಗಳನ್ನು ಶಿಫಾರಸು ಮಾಡುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ಸರ್ಕಾರ ಇದರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.