ತಿರುನೆಲ್ವೇಲಿ (ತಮಿಳುನಾಡು): ಶಿಕ್ಷಕ ಹಾಗೂ ವಿದ್ಯಾರ್ಥಿ ಸಮುದಾಯದಗಳೊಂದಿಗೆ ಚರ್ಚಿಸದೆ ಕೇಂದ್ರ ಸರ್ಕಾರವು ನೂತನ ಶಿಕ್ಷಣ ನೀತಿ-2020ನ್ನು ಜಾರಿಗೊಳಿಸಿದೆ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹೊಸ ಶಿಕ್ಷಣ ನೀತಿಯ ಮೂಲಕ ದೇಶದಲ್ಲಿ ನಿರ್ದಿಷ್ಟ ಧರ್ಮದ ನೀತಿಗಳನ್ನು ಹೇರಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಇಲ್ಲಿನ ಸೇಂಟ್ ಝೇವಿಯರ್ಸ್ ಕಾಲೇಜಿನಲ್ಲಿ ಉಪನ್ಯಾಸಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳಿಗಾಗಿ ರೂಪಿತವಾಗಿರಬೇಕು ಹಾಗೂ ಅದನ್ನು ಶಿಕ್ಷಕರು ಮುನ್ನಡೆಸಬೇಕು. ಯಾವುದೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕಾದರೆ ಅದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಚರ್ಚೆಯಿಂದ ಒಮ್ಮತವಾಗಿ ಮೂಡಿಬರಬೇಕು. ಆದರೆ ಹೀಗೆ ಆಗದಿರುವುದು ನಮ್ಮ ದುರಾದೃಷ್ಟ." ಎಂದು ರಾಹುಲ್ ಹೇಳಿದರು.