ನವದೆಹಲಿ: ಅಸ್ಸೋಂ-ಮಿಜೋರಾಂ ಗಡಿಯಲ್ಲಿ ಇತ್ತೀಚೆಗೆ ನಡೆದ ಮಾರಕ ಘರ್ಷಣೆಗಳ ಕುರಿತು ಸಿಬಿಐನಂತಹ ತನಿಖಾ ಸಂಸ್ಥೆಗಳಿಗೆ ವಹಿಸುವ ಯಾವುದೇ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿಲ್ಲ. ಆದರೆ, ಶಾಂತಿಯುತ ರೀತಿಯಲ್ಲಿ ಸಾಧ್ಯವಾದಷ್ಟು ಬೇಗ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಇಬ್ಬರು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದು, ಕೇಂದ್ರ ಸರ್ಕಾರವು ಈ ಗಡಿ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುವ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದರು.
ಅಸ್ಸೋಂ ಮತ್ತು ಮಿಜೋರಾಂ ನಡುವಿನ ಪ್ರಸ್ತುತ ಗಡಿ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಲು ಕೇಂದ್ರ ಸರ್ಕಾರ ಬಯಸುತ್ತದೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಬ್ಬರು ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವಾ ಶರ್ಮಾ (ಅಸ್ಸೋಂ) ಮತ್ತು ಜೊರಮಥಾಂಗ (ಮಿಜೋರಾಂ) ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿದರು. ಜೊರಮಥಂಗ ಕೂಡ ಟ್ವೀಟ್ ಮಾಡಿದ್ದು, "ಕೇಂದ್ರ ಸರ್ಕಾರದಿಂದ #ಅಸ್ಸೋಂ ಮಿಜೋರಾಮ್‌ಬೋರ್ಡರ್ ಟೆನ್ಶನ್ಗೆ ಸೌಹಾರ್ದಯುತ ಪರಿಹಾರಕ್ಕಾಗಿ ನಾನು ಇನ್ನೂ ಆಶಿಸುತ್ತೇನೆ. ಎಂದು ಟ್ವೀಟ್ ಮಾಡಿ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಶಾ ಮತ್ತು ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲಪ್ರದೇಶ, ಮಣಿಪುರ, ತ್ರಿಪುರ ಮತ್ತು ಸಿಕ್ಕಿಂ ಮುಖ್ಯಮಂತ್ರಿಗಳನ್ನು ಟ್ಯಾಗ್ ಮಾಡಿದ್ದಾರೆ.
ಈ ಬಗ್ಗೆ ಅಸ್ಸೋಂ ಸಿಎಂ ಶರ್ಮಾ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಈಶಾನ್ಯದ ಉತ್ಸಾಹವನ್ನು ಜೀವಂತವಾಗಿರಿಸುವುದರ ಮೇಲೆ ನಮ್ಮ ಮೊದಲ ಚಿತ್ತ. ಅಸ್ಸೋಂ-ಮಿಜೋರಾಂ ಗಡಿಯಲ್ಲಿ ಏನಾಯಿತು ಎಂಬುದು ಎರಡೂ ರಾಜ್ಯಗಳ ಜನರಿಗೆ ಸ್ವೀಕಾರಾರ್ಹವಲ್ಲ. ಗಡಿ ವಿವಾದಗಳನ್ನು ಚರ್ಚೆಯ ಮೂಲಕ ಮಾತ್ರ ಪರಿಹರಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಜುಲೈ 26ರಂದು ಐದು ಅಸ್ಸೋಂ ಪೊಲೀಸ್ ಸಿಬ್ಬಂದಿ ಮತ್ತು ಒಬ್ಬ ನಾಗರಿಕನನ್ನು ಕೊಂದ ಘರ್ಷಣೆಯನ್ನು ತನಿಖೆ ಮಾಡುವ ಕೆಲಸವನ್ನು ಸಿಬಿಐನಂತಹ ತನಿಖಾ ಸಂಸ್ಥೆಗೆ ನೀಡಲಾಗುತ್ತದೆಯೇ ಎಂದು ಕೇಳಿದಾಗ, ಇಬ್ಬರು ಅಧಿಕಾರಿಗಳು ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದರು. ಅದಲ್ಲದೆ, ಈ ರೀತಿಯ ತನಿಖೆಗಾಗಿ ಯಾವುದೇ ರಾಜ್ಯ ಸರ್ಕಾರದಿಂದ ಯಾವುದೇ ಔಪಚಾರಿಕ ಮನವಿ ಇಲ್ಲ ಎಂದು ಅವರು ಹೇಳಿದರು.