ಶ್ರೀನಗರ (ಜಮ್ಮು-ಕಾಶ್ಮೀರ):ಮುಂದಿನ ಎರಡು-ಮೂರು ವರ್ಷಗಳಲ್ಲಿ ಜಮ್ಮುಕಾಶ್ಮೀರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 60 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ಎಂದು ಕೇಂದ್ರ ಕಶಲ್ಯಾಭಿವೃದ್ಧಿ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಬುದ್ಗಾಮ್ಮಲ್ಲಿ ಮಾತನಾಡಿರುವ ಅವರು, ಕೇಂದ್ರಾಡಳಿತ ಪ್ರದೇಶ ಜಮ್ಮುಕಾಶ್ಮೀರದ ಅಭಿವೃದ್ಧಿಗಾಗಿಯೇ ಕೇಂದ್ರ ಸರ್ಕಾರ 60 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಿದೆ. ಜಮ್ಮುಕಾಶ್ಮೀರ ಮುಂದಿನ ಎರಡು ಮೂರು ವರ್ಷಗಳಲ್ಲಿ ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಸ ಅಲೆಯನ್ನು ನೋಡಲಿದೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರ (ಜೆ-ಕೆ)ಕ್ಕೆ ಕೇಂದ್ರ ಸರ್ಕಾರದ ವಿಶೇಷ ಪ್ರಚಾರ ಕಾರ್ಯಕ್ರಮದ ಭಾಗವಾಗಿ ಅವರು ಜಿಲ್ಲೆಗೆ ಆಗಮಿಸಿದ್ದರು. ಉದ್ಯೋಗ ಸೃಷ್ಟಿಸಲು, ಸ್ಥಳೀಯ ಆರ್ಥಿಕತೆ ಉತ್ತೇಜಿಸಲು ಈ ಮೊತ್ತವನ್ನು ಬಳಸಿಕೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಕಾಶ್ಮೀರದ ಯುವಜನತೆ ಪ್ರತಿಭೆ ಮತ್ತು ಕೌಶಲ್ಯವುಳ್ಳವುರು ಅನ್ನೋದನ್ನ ನಾನು ಗಮನಿಸಿದ್ದೇನೆ. ಅವರಿಗೆ ಹೆಚ್ಚಿನದ್ದನ್ನು ಕಲಿಯಲು ತರಬೇತಿ ಬೇಕು. ಉದ್ಯೋಗ ಸೃಷ್ಟಿಗೆ ಅಗಾಧ ಅವಕಾಶಗಳು ಲಭ್ಯವಿರುವುದರಿಂದ ಅವರು ಎಲ್ಲಾ ರೀತಿಯಲ್ಲಿಯೂ ಸಬಲರಾಗಿರಬೇಕು ಎಂದರು.