ನವದೆಹಲಿ: ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳು ವಿಧಿಸುವ ಸೇವಾ ಶುಲ್ಕ ಗ್ರಾಹಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ, ಸೇವಾ ಶುಲ್ಕವನ್ನು ವಿಧಿಸಬಾರದು ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದ್ದು, ಈ ಕುರಿತು ಸಂವಿಧಾನಾತ್ಮಕವಾಗಿ ಕಾನೂನು ರೂಪಿಸಲಾಗುವುದು ಎಂದು ತಿಳಿಸಿದೆ.
ರೆಸ್ಟೊರೆಂಟ್‌ಗಳು ಕಡ್ಡಾಯವಾಗಿ ಸೇವಾ ಶುಲ್ಕವನ್ನು ವಿಧಿಸುತ್ತಿರುವ ಕುರಿತು ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಗೆ ದೂರುಗಳು ಹೆಚ್ಚುತ್ತಿರುವುದರಿಂದ ಗ್ರಾಹಕ ವ್ಯವಹಾರಗಳ ಇಲಾಖೆ ( ಡಿಒಸಿಎ) ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರು ಗುರುವಾರ ಸಭೆ ನಡೆಸಿ, ಈ ಆದೇಶ ಹೊರಡಿಸಿದ್ದಾರೆ. ಸಭೆಯಲ್ಲಿ ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಮತ್ತು ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (FHRAI), ಗ್ರಾಹಕ ಸಂಘಟನೆಗಳು ಸೇರಿದಂತೆ ಪ್ರಮುಖ ರೆಸ್ಟೋರೆಂಟ್ ಸಂಘಗಳು ಭಾಗವಹಿಸಿದ್ದವು.