ನವದೆಹಲಿ :ಅಸ್ಸೋಂನ ಕರ್ಬಿ ಆ್ಯಂಗ್ಲಾಂಗ್ ಜಿಲ್ಲೆಯ ಆರು ಬಂಡುಕೋರ ಗುಂಪುಗಳೊಡನೆ ಕೇಂದ್ರ ಸರ್ಕಾರ ಶಾಂತಿ ಒಪ್ಪಂದ ಮಾಡಿಕೊಳ್ಳುತ್ತದೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಶನಿವಾರ ಘೋಷಿಸಿದ್ದಾರೆ.
ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಆ್ಯಂಡ್ ಡೆವೆಲೆಪ್ಮೆಂಟ್ (ಬಿಪಿಆರ್&ಡಿ)ಯ 51ನೇ ಸಂಸ್ಥಾಪನಾ ದಿನದ ಅಂಗವಾಗಿ ಮಾತನಾಡಿದ ಅಮಿತ್ ಶಾ, ಈ ಮಾಹಿತಿಯನ್ನು ನೀಡಿದ್ದಾರೆ. ಕೇಂದ್ರ ಗೃಹ ಮಂತ್ರಿ, ಅಸ್ಸೋಂನ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರ ಹಾಜರಿಯಲ್ಲಿ ಆರು ಬಂಡುಕೋರ ಗುಂಪುಗಳ ನಡುವೆ ಶಾಂತಿ ಒಪ್ಪಂದವಾಗಲಿದೆ.
ಈಶಾನ್ಯ ರಾಜ್ಯಗಳಲ್ಲಿ ಸುಮಾರು ಎರಡು ವರ್ಷಗಳಿಂದ 3,700 ಮಂದಿ ಶಸ್ತ್ರ ಸಜ್ಜಿತ ಬಂಡುಕೋರರು ಶರಣಾಗಿದ್ದಾರೆ ಎಂದಿರುವ ಅಮಿತ್ ಶಾ, ಶಸ್ತ್ರಗಳನ್ನು ಕೆಳಗಿಳಿಸಿ ಶರಣಾಗಲು ಬಯಸುವ ಗುಂಪುಗಳೊಡನೆ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸದಾ ಸಿದ್ಧವಿದೆ ಎಂದಿದ್ದಾರೆ.