ನವದೆಹಲಿ:ನವೆಂಬರ್ 8ರಿಂದ ಜಾರಿಯಾಗುವಂತೆ ತನ್ನೆಲ್ಲಾ ಹಂತದ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಪುನಃ ಜಾರಿಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿರುವುದಾಗಿ ಸಿಬ್ಬಂದಿ ಸಚಿವಾಲಯ ತಿಳಿಸಿದೆ.
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವುದು ವಿಭಾಗದ ಮುಖ್ಯಸ್ಥರ ಜವಾಬ್ದಾರಿ ಎಂದು ಸಿಬ್ಬಂದಿ ಸಚಿವಾಲಯವು ಕಚೇರಿ ಜ್ಞಾಪಕ ಪತ್ರದಲ್ಲಿ ತಿಳಿಸಿದೆ. ಇದರ ಜೊತೆಗೆ, ಎಂಟು ಅಂಶಗಳನ್ನು ಪಟ್ಟಿಮಾಡಿದೆ. ಈ ಅಂಶಗಳು ಬಯೋಮೆಟ್ರಿಕ್ ಯಂತ್ರಗಳ ಬಳಿ ಕಡ್ಡಾಯವಾಗಿ ಸ್ಯಾನಿಟೈಸರ್‌ಗಳನ್ನು ಇಡುವುದನ್ನು ಒಳಗೊಂಡಿವೆ.
ಬಯೋಮೆಟ್ರಿಕ್ ಹಾಜರಾತಿ ಮೊದಲು ಮತ್ತು ನಂತರ ನೌಕರರು ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು, 6 ಅಡಿ ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅಗತ್ಯವಿದ್ದಲ್ಲಿ, ಜನದಟ್ಟಣೆಯನ್ನು ತಪ್ಪಿಸಲು ಹೆಚ್ಚುವರಿ ಬಯೋಮೆಟ್ರಿಕ್ ಹಾಜರಾತಿ ಯಂತ್ರಗಳನ್ನು ಅಳವಡಿಸಬೇಕು. ಉದ್ಯೋಗಿಗಳು ಹಾಜರಾತಿ ಸಮಯ ಸೇರಿ ಎಲ್ಲಾ ಸಮಯದಲ್ಲೂ ಮಾಸ್ಕ್ ಅಥವಾ ಫೇಸ್ ಕವರ್‌ಗಳನ್ನು ಧರಿಸಬೇಕಾಗುತ್ತದೆ.
ಬಯೋಮೆಟ್ರಿಕ್ ಸ್ಕ್ಯಾನರ್‌ಗಳ ಟಚ್‌ಪ್ಯಾಡ್ ಅಥವಾ ಸ್ಕ್ಯಾನರ್ ಪ್ರದೇಶಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಲು ಅಥವಾ ಒರೆಸಲು ಬಯೋಮೆಟ್ರಿಕ್ ಕೇಂದ್ರಗಳ ಬಳಿ ಗೊತ್ತುಪಡಿಸಿದ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ. ಸಾಧ್ಯವಾದಷ್ಟು ವಿಡಿಯೋ ಕಾನ್ಫರೆನ್ ಮೂಲಕವೇ ಮೀಟಿಂಗ್ ನಡೆಸುವುದನ್ನು ಮುಂದುವರಿಸಲು ಸೂಚಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಅನಗತ್ಯ ಎಂದಾದಲ್ಲಿ ವ್ಯಕ್ತಿಗತ ಭೇಟಿ ಕೈಬಿಡಬಹುದೆಂದು ಆದೇಶದಲ್ಲಿ ಹೇಳಲಾಗಿದೆ.
ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಎಲ್ಲಾ ಸಮಯದಲ್ಲೂ, ಕಚೇರಿಗಳಲ್ಲಿ ಕೋವಿಡ್ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.