ನವದೆಹಲಿ:ಆರ್ಥಿಕ ದಿವಾಳಿಯಿಂದಾಗಿ ನಲುಗಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಇಂದು ಸರ್ವಪಕ್ಷ ಸಭೆ ಕರೆದಿದೆ. ಸಭೆಯಲ್ಲಿ ಭಾರತ, ಶ್ರೀಲಂಕಾಗೆ ಈವರೆಗೂ ನೀಡಿದ ನೆರವು ಮತ್ತು ಇನ್ನು ಮುಂದೆ ನೀಡಬೇಕಾದ ಸಹಾಯದ ಬಗ್ಗೆಯೂ ಚರ್ಚೆ ನಡೆಯಲಿದೆ.
ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ರಾಜಕೀಯ ನಾಯಕರಿಗೆ ಶ್ರೀಲಂಕಾದ ಬಿಕ್ಕಟ್ಟಿನ ಬಗ್ಗೆ ವಿವರವಾದ ಮಾಹಿತಿ ನೀಡಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು. ಇದಲ್ಲದೇ, ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಅವರು, ಲಂಕಾದಲ್ಲಿನ ಪರಿಸ್ಥಿತಿ ಮತ್ತು ಭಾರತವು ಈ ಹಿಂದೆ ದ್ವೀಪ ರಾಷ್ಟ್ರಕ್ಕೆ ನೀಡಿದ ನೆರವಿನ ಬಗ್ಗೆಯೂ ಸದಸ್ಯರ ಗಮನ ಸೆಳೆಯಲಿದ್ದಾರೆ ಎಂದು ಹೇಳಲಾಗಿದೆ.
ಶ್ರೀಲಂಕಾ ಬಿಕ್ಕಟ್ಟಿನಿಂದಾಗಿ ತಮಿಳುನಾಡಿಗೆ ಅಲ್ಲಿನ ನಿರಾಶ್ರಿತರು ಹೆಚ್ಚಿನ ಪ್ರಮಾಣದಲ್ಲಿ ವಲಸೆ ಬರುತ್ತಿದ್ದಾರೆ. ಇದು ರಾಜ್ಯದಲ್ಲಿ ಸಮಸ್ಯೆ ಉಂಟುಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಜೈಶಂಕರ್ ಅವರ ಬಳಿ ಕೆಲ ದಿನಗಳ ಹಿಂದೆ ಅರಿಕೆ ಮಾಡಿಕೊಂಡಿದ್ದರು.
ಲಂಕಾ ಪರಿಸ್ಥಿತಿಯು ಕಳವಳಕಾರಿಯಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ದ್ವೀಪ ರಾಷ್ಟ್ರಕ್ಕೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಅನುಮತಿ ನೀಡಬೇಕು. ಅಲ್ಲದೇ ವಲಸಿಗರ ಸಮಸ್ಯೆಯನ್ನು ಬಗೆಹರಿಸಬೇಕು ಎಂದೂ ಕೋರಿದ್ದರು. ಶ್ರೀಲಂಕಾದಲ್ಲಿ ಹಣದುಬ್ಬರ, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಯ ತೀವ್ರ ಕೊರತೆಯಿಂದಾಗಿ ದೇಶದಲ್ಲಿ ಅರಾಜಕತೆ ಉಂಟಾಗಿದೆ.
ಇದನ್ನೂ ಓದಿ:'ರಿಟರ್ನ್ ಗಿಫ್ಟ್' ನೀಡಿದ ಪ್ರಕೃತಿ, ಮುಂಬೈ ಬೀಚ್ ನೋಡಿದ್ರೆ ಗೊತ್ತಾಗುತ್ತೆ!