ನವದೆಹಲಿ: ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾನಿಕರವಾಗುವ 138 ಬೆಟ್ಟಿಂಗ್ ಮತ್ತು 94 ಲೋನ್ ಕೊಡುವ ಆ್ಯಪ್‌ಗಳ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಕ್ರಮವನ್ನು ತುರ್ತಾಗಿ ಕೈಗೊಳ್ಳುವಂತೆ ಗೃಹ ವ್ಯವಹಾರಗಳ ಸಚಿವಾಲಯ (MHA) ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಶಿಫಾರಸುಗಳ ಮಾಡಿದೆ ಎನ್ನಲಾಗಿದ್ದು, ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 69 ಅಡಿಯಲ್ಲಿ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾನಿಕರವಾಗುವ ತಂತ್ರಾಂಶಗಳನ್ನು ನಿಷೇಧಿಸಲು ಮುಂದಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸಣ್ಣ ಪ್ರಮಾಣದ ಸಾಲವನ್ನು ಪಡೆದ ಸಾಮಾನ್ಯ ಜನರ ಸುಲಿಗೆ ಮತ್ತು ಕಿರುಕುಳದ ಹಲವಾರು ದೂರುಗಳನ್ನು ಆಧರಿಸಿ ಈ ನಿರ್ಧಾರವನ್ನು ಮಾಡಲಾಗಿದೆ. ಈ ಆ್ಯಪ್‌ಗಳು ಭಾರತೀಯರನ್ನು ನೇಮಿಸಿಕೊಂಡು ಅವರಲ್ಲಿ ಚೀನಿ ವಿಚಾರಗಳನ್ನು ತುಂಬಲಾಗುತ್ತಿದೆ ಎಂದು ಹೇಳಲಾಗ್ತಿದೆ. ಹತಾಶೆಯಲ್ಲಿ ಮತ್ತು ಹಣದ ಅಗತ್ಯ ಹೆಚ್ಚಿರುವ ವ್ಯಕ್ತಿಗಳನ್ನು ಗುರಿಯಾಗಿಸಿ ಸಾಲ ನೀಡಿ ನಂತರ ಸುಮಾರು 3,000 ಪಟ್ಟು ಬಡ್ಡಿ ವಿಧಿಸುತ್ತಾರೆ.
ಸಾಲಗಾರರು ಬಡ್ಡಿಯನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ ಅಪ್ಲಿಕೇಶನ್‌ಗಳ ಮೂಲಕ ಸಾಲ ಪಡೆದವರಿಗೆ ಕಿರುಕುಳ ನೀಡಲಾಗುತ್ತದೆ. ಸಾಲ ತೆಗೆದುಕೊಂಡವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುವುದು ಮತ್ತು ಅವರ ಮಾರ್ಫ್ ಮಾಡಿದ ಫೋಟೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕುವುದನ್ನು ಮಾಡುತ್ತಾರೆ. ಅಲ್ಲದೇ ಸಾಲಗಾರರ ಮೊಬೈಲ್ನಲ್ಲಿರುವ ಕಾಂಟಾಕ್ಟ್ಅನ್ನು ಬಳಸಿಕೊಂಡು ಸ್ನೇಹಿತರು ಮತ್ತು ಸಂಬಂಧಿಕರಿಗೆ ನಿಮ್ಮ ಅಶ್ಲೀಲ ಫೋಟೋ ಕಳಿಸುತ್ತೇವೆ ಎಂದು ಬೆದರಿಕೆ ಹಾಕಲಾಗುತ್ತದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಇಂತಹ ಸಾಲಗಳನ್ನು ತೆಗೆದುಕೊಂಡು ಅಥವಾ ಬೆಟ್ಟಿಂಗ್ ಆ್ಯಪ್ಗಳನ್ನು ಬಳಸಿ ಹಣ ಕಳೆದುಕೊಂಡವರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿವೆ. ತೆಲಂಗಾಣ, ಒಡಿಶಾ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಈ ಅಪ್ಲಿಕೇಶನ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದವು ಎಂದು ಮೂಲಗಳಿಂದ ತಿಳಿದು ಬಂದಿದೆ.