ನವದೆಹಲಿ: ಜೈನ ಸಮುದಾಯದ ಅತ್ಯಂತ ಪವಿತ್ರ ಶ್ರದ್ಧಾ ಭಕ್ತಿಯ ಕೇಂದ್ರವಾದ ಶ್ರೀ ಸಮ್ಮೇದ್ ಶಿಖರ್ಜಿಯನ್ನು 'ಪ್ರವಾಸಿ ತಾಣ'ವೆಂದು ಘೋಷಿಸಿರುವ ಜಾರ್ಖಂಡ್ ಸರ್ಕಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಕಾವು ಜೋರಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಗುರುವಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರವು 'ಸಮ್ಮೇದ್ ಶಿಖರ್ಜಿ' ಇರುವ ಪರಸ್ನಾಥ್ ಬೆಟ್ಟದಲ್ಲಿ ತನ್ನ ಎಲ್ಲಾ ಪ್ರವಾಸೋದ್ಯಮ ಚಟುವಟಿಕೆಗಳನ್ನು ಗುರುವಾರ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ, ಮಂದಿರಗಳ ಪಾವಿತ್ರ್ಯತೆಯನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳುವಂತೆಯೂ ಜಾರ್ಖಂಡ್ ಸರ್ಕಾರಕ್ಕೆ ಸೂಚಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದ ಮೇರೆಗೆ ಕೇಂದ್ರ ಪರಿಸರ ಸಚಿವಾಲಯವು ಈ ಕುರಿತು ರಾಜ್ಯಕ್ಕೆ ಪತ್ರವನ್ನು ರವಾನಿಸಿದೆ ಎಂದು ಮೂಲಗಳು ತಿಳಿಸಿವೆ. ನಿನ್ನೆ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರನ್ನು ಜೈನ ಸಮುದಾಯದ ಕೆಲ ಮುಖಂಡರು ಭೇಟಿ ಮಾಡಿ, ತಮ್ಮ ಪ್ರಧಾನ ದೇಗುಲದ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಘೋಷಿಸುವುದರಿಂದ ಅದರ ಪಾವಿತ್ರ್ಯಕ್ಕೆ ಧಕ್ಕೆಯಾಗಲಿದೆ. ಜೈನ ಧರ್ಮವು ಅಹಿಂಸೆಯನ್ನು ನಂಬುತ್ತದೆ. ಅಲ್ಲಿನ ಸರ್ಕಾರದ ನಿರ್ಧಾರದಿಂದಾಗಿ ಮಾಂಸಾಹಾರಿ ಹೋಟೆಲ್, ಬಾರ್‌ಗಳು ತಲೆ ಎತ್ತಲಿವೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವರು, ಸಮ್ಮೇದ್ ಶಿಖರ್ಜಿಯನ್ನು ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ ಬಳಿಕ ಕೇಂದ್ರ ಸರ್ಕಾರದಿಂದ ಈ ಮಹತ್ವದ ಆದೇಶ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದ ಜೈನರು ಹೋರಾಟವನ್ನು ಹಿಂತೆಗೆದುಕೊಂಡಿದ್ದಾರೆ.
ಶ್ರೀ ಸಮ್ಮೇದ್ ಶಿಖರ್ಜಿ ಮಹತ್ವ: ಜೈನ ಪವಿತ್ರ ಕ್ಷೇತ್ರಗಳಿರುವ ಸಮ್ಮೇದ್ ಶಿಖರ್ಜಿ ಇರುವ ಪಾರಸ್‌ನಾಥ್ ಬೆಟ್ಟಗಳು ಜಾರ್ಖಂಡ್‌ನ ಗಿರಿಡಿ ಜಿಲ್ಲೆಯಲ್ಲಿವೆ. ಇದು ಈ ರಾಜ್ಯದ ಅತಿ ದೊಡ್ಡ ಪರ್ವತ ಶ್ರೇಣಿಯೂ ಹೌದು. ಪಾರಸ್‌ನಾಥ್ ಬೆಟ್ಟಗಳು ರಾಜಧಾನಿ ರಾಂಚಿಯಿಂದ ಸುಮಾರು 160 ಕಿ.ಮೀಟರ್ ದೂರದಲ್ಲಿದೆ. ಸಮ್ಮೇದ್ ಶಿಖರ್ಜಿಯು ಜೈನ ಧರ್ಮದ ದಿಗಂಬರ ಮತ್ತು ಶ್ವೇತಾಂಬರ ಪಂಥದವರಿಗೆ ಅತ್ಯಂತ ಶ್ರದ್ಧಾ ಭಕ್ತಿಯ ಯಾತ್ರಾ ಕೇಂದ್ರ. ಜೈನ ಧರ್ಮದ 24 ತೀರ್ಥಂಕರರ ಪೈಕಿ 20 ತೀರ್ಥಂಕರರು ಇದೇ ಬೆಟ್ಟಗಳಲ್ಲಿ ಮೋಕ್ಷ ಹೊಂದಿದ್ದಾರೆ ಎಂಬ ನಂಬಿಕೆ ಇದೆ.