ನವದೆಹಲಿ:ಭಾರತದ ಒಕ್ಕೂಟ ವ್ಯವಸ್ಥೆ ಬಲಪಡಿಸಲು, ಅರ್ಥಪೂರ್ಣವಾಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಂದು ಪಿಎಂ ಮೋದಿ ನೇತೃತ್ವದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನೀತಿ ಆಯೋಗದ 6ನೇ ಆಡಳಿತ ಮಂಡಳಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶವು ಸ್ವಾತಂತ್ರ್ಯ ಪಡೆದು 75 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸಭೆ ಹೆಚ್ಚು ಮಹತ್ವದ್ದಾಗಿದೆ ಎಂದರು.
ಪಿಎಂ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ 6ನೇ ಆಡಳಿತ ಮಂಡಳಿ ಸಭೆ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದಾಗಿ ಕೆಲಸ ಮಾಡಿ, ಇಡೀ ಪ್ರಪಂಚದ ಮುಂದೆ ಭಾರತ ಒಳ್ಳೆಯ ಹೆಸರು ಗಳಿಸಲು ಸಾಧ್ಯ ಮಾಡಿಕೊಟ್ಟಿವೆ. ಇದೀಗ ನಾವು ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು ಸಹಕರಿಸಬೇಕಿದೆ ಎಂದು ಮೋದಿ ಹೇಳಿದರು.
ಈ ವರ್ಷದ ಬಜೆಟ್‌ಗೆ ಉತ್ತರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಷ್ಟ್ರದ ಮನಸ್ಥಿತಿ ಬದಲಾಯಿಸಿದೆ. ಸಮಯ ವ್ಯರ್ಥ ಮಾಡದೇ ದೇಶವು ವೇಗವಾಗಿ ಪ್ರಗತಿ ಸಾಧಿಸಲು ಬಯಸಿದೆ ಎಂಬುದನ್ನು ಯುವಜನತೆ ಅರ್ಥ ಮಾಡಿಕೊಂಡಿದೆ. ಕಳೆದ ಕೆಲವು ವರ್ಷಗಳಲ್ಲಿ ಬಡವರ ಸಬಲೀಕರಣಕ್ಕಾಗಿ ಬ್ಯಾಂಕ್ ಖಾತೆಗಳನ್ನು ತೆರೆಯುವುದು, ವ್ಯಾಕ್ಸಿನೇಷನ್ ಮತ್ತು ಆರೋಗ್ಯ ಸೌಲಭ್ಯಗಳ ಹೆಚ್ಚಳ, ಉಚಿತ ವಿದ್ಯುತ್ ಮತ್ತು ಅನಿಲ ಸಂಪರ್ಕ ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪ್ರಧಾನಿ ತಿಳಿಸಿದರು.
ಇದನ್ನೂ ಓದಿ: ಟೂಲ್ಕಿಟ್ ಕೇಸ್: ಮಾನವ ಹಕ್ಕು ಪ್ರತಿಪಾದಿಸಿ ದಿಶಾಗೆ ಬೆಂಬಲ ವ್ಯಕ್ತಪಡಿಸಿದ ಗ್ರೆಟಾ ಥನ್ಬರ್ಗ್
ನೀತಿ ಆಯೋಗದ ಆಡಳಿತ ಮಂಡಳಿ ಸಭೆಯು ಅಂತರವಲಯ, ಅಂತರ ವಿಭಾಗೀಯ ಸಮಸ್ಯೆಗಳನ್ನು ಚರ್ಚಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಪ್ರಧಾನಿ ಮೋದಿಯೊಂದಿಗೆ ಕರ್ನಾಟಕ ಸಿಎಂ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು, ಕೇಂದ್ರ ಸಚಿವರು, ಆಡಳಿತ ಮಂಡಳಿಯ ಉಪಾಧ್ಯಕ್ಷ ರಾಜೀವ್ ಕುಮಾರ್ ಮತ್ತು ಅದರ ಮಾಜಿ ಅಧಿಕಾರಿಗಳು, ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಮತ್ತು ಇತರ ಅಧಿಕಾರಿಗಳು, ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರಾಡಳಿತ ಪ್ರದೇಶವಾಗಿ ಜಮ್ಮು - ಕಾಶ್ಮೀರ ಹಾಗೂ ಮೊದಲ ಬಾರಿ ಲಡಾಖ್ ಆಡಳಿತ ಮಂಡಳಿ ಸಭೆಗೆ ಹಾಜರಾಗಿದ್ದವು.