ನವದೆಹಲಿ:ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಲು ಕೇಂದ್ರ ಗೃಹ ಸಚಿವಾಲಯವು ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಸೂಚಿಸಿದೆ.
ಸಮಯ ವ್ಯರ್ಥ ಮಾಡದೇ ಶೀಘ್ರದಲ್ಲೇ ವರದಿ ಸಲ್ಲಿಸಿ, ವಿಫಲವಾದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ಗೃಹ ಸಚಿವಾಲಯ ಪತ್ರ ಬರೆದು ಎಚ್ಚರಿಕೆ ನೀಡಿದೆ.
ನಿಮ್ಮ ರಾಜ್ಯದಲ್ಲಿ ಹಿಂಸಾಚಾರಗಳು ಇನ್ನೂ ನಿಂತಿಲ್ಲ. ಅದನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ: ಬಿಜೆಪಿ, ಎಬಿವಿಪಿ ಕಚೇರಿ ಧ್ವಂಸ
ಮೇ 2ರಂದು ಚುನಾವಣಾ ಫಲಿತಾಂಶ ಬಂದ 24 ಗಂಟೆಗಳಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಅನೇಕ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಕ್ಷದ ಅನೇಕ ಕಾರ್ಯಕರ್ತರ ಮನೆ ಮತ್ತು ಅಂಗಡಿಗಳು ಧ್ವಂಸವಾಗಿವೆ. ಮಮತಾ ಬ್ಯಾನರ್ಜಿ ಸೋಲು ಮತ್ತು ತೃಣಮೂಲ ಕಾಂಗ್ರೆಸ್ ಗೆಲುವನ್ನು ಹಿಂಸೆ ಮತ್ತು ರಕ್ತದಿಂದ ಆಚರಿಸಲು ಟಿಎಂಸಿ ಪ್ರಾರಂಭಿಸಿದೆ ಎಂದು ಬಿಜೆಪಿ ಆರೋಪಿಸಿದೆ.
ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಮಮತಾ ಬ್ಯಾನರ್ಜಿ, ಹಳೆಯ ವಿಡಿಯೋಗಳನ್ನು ತೋರಿಸಿ ಈಗ ರಾಜ್ಯದಲ್ಲಿ ಗಲಭೆಯೆದ್ದಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಇದನ್ನೂ ಈಗಲೇ ನಿಲ್ಲಿಸಬೇಕು ಎಂಬುದು ಎಲ್ಲಾ ರಾಜಕೀಯ ಪಕ್ಷಗಳಿಗೆ ನನ್ನ ಮನವಿ. ಬಂಗಾಳವು ಏಕತೆಯ ಸ್ಥಳವಾಗಿದೆ ಎಂದು ಹೇಳಿದ್ದಾರೆ.
ಟಿಎಂಸಿ ದೌರ್ಜನ್ಯ ಖಂಡಿಸಿ ಬಂಗಾಳಕ್ಕೆ ಭೇಟಿ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಹಿಂಸಾಚಾರಕ್ಕೆ ಒಳಗಾದ ಬಿಜೆಪಿ ಕಾರ್ಯಕರ್ತರು ಮತ್ತು ಅವರ ಕುಟುಂಬಗಳನ್ನು ಭೇಟಿ ಮಾಡಿದ್ದಾರೆ.