ನವದೆಹಲಿ: ಕೇಂದ್ರೀಯ ವಿದ್ಯಾಲಯಗಳಿಗೆ ಪ್ರವೇಶಕ್ಕಾಗಿ ಸಂಸತ್ ಸದಸ್ಯರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ ಹಲವು ವಿಭಾಗಗಳಲ್ಲಿ ನೀಡಲಾಗಿದ್ದ ಕೋಟಾಗಳನ್ನು ರದ್ದುಗೊಳಿಸಿದೆ. ಕುಸಿಯುತ್ತಿರುವ ಶಿಕ್ಷಣದ ಗುಣಮಟ್ಟ ಗಮನದಲ್ಲಿಟ್ಟುಕೊಂಡು ಕೇಂದ್ರೀಯ ವಿದ್ಯಾಲಯ ಸಂಘಟನೆಯು ಈ ಸುತ್ತೋಲೆಯನ್ನು ಹೊರಡಿಸಿದೆ.
ಕೇಂದ್ರೀಯ ವಿದ್ಯಾಲಯಗಳಿಗೆ ಸಂಸದರ ಕೋಟಾ ಸೇರಿ ಇನ್ನಿತರ ವಿಶೇಷ ನಿಬಂಧನೆಗಳಡಿ ಪ್ರವೇಶಾತಿಯನ್ನು ತಡೆ ಹಿಡಿಯಲಾಗಿದೆ. ಸಂಸದರ ಕೋಟಾ ರದ್ದುಗೊಳಿಸಬೇಕೋ ಅಥವಾ ಮುಂದುವರಿಸಬೇಕೋ ಎಂಬ ಬಗ್ಗೆ ಸಂಸದರ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್ತಿನಲ್ಲಿ ಹೇಳಿತ್ತು. ಇದೀಗ ಅಂತಹ ಕೋಟಾಗಳನ್ನು ರದ್ದುಗೊಳಿಸಿ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಕೇಂದ್ರೀಯ ವಿದ್ಯಾಲಯಗಳಲ್ಲಿ ದಾಖಲಾತಿಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ. ಈ ಹಿಂದೆಯೇ ಅನುಮೋದಿತ ವಿದ್ಯಾರ್ಥಿಗಳ ಸಾಮರ್ಥ್ಯ ಮೀರಿದ ಹಲವಾರು ವಿವೇಚನಾ ಕೋಟಾಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು. ಈ ನಿಯಮ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಕೆವಿಎಸ್ಗಳ ಕಾರ್ಯನಿರ್ವಹಣೆ ಪರಾಮರ್ಶೆ ನಡೆಸಿದ್ದ ಸಚಿವರು:ಇತ್ತೀಚೆಗೆ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆಯ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಕೆವಿಎಸ್ ಕಾರ್ಯನಿರ್ವಹಣೆಯ ಪರಾಮರ್ಶೆಯನ್ನು ನಡೆಸಿದ್ದರು. ಈ ಕೋಟಾಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಮಿತಿಮೀರಿದ ಬಗ್ಗೆ ಮಾಹಿತಿ ತಿಳಿದುಬಂದಿತ್ತು. ಅಲ್ಲದೇ ಇದು ಶಿಷ್ಯ - ಶಿಕ್ಷಕರ ಅನುಪಾತ ಮತ್ತು ಬೋಧನೆ - ಕಲಿಕೆಯ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬ ಅಂಶವನ್ನು ಮನಗೊಳ್ಳಲಾಗಿತ್ತು. ಇದನ್ನೇ ಗಮನದಲ್ಲಿಟ್ಟುಕೊಂಡು ಈ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಸಚಿವಾಲಯ, ಪ್ರಾಯೋಜಕ ಸಂಸ್ಥೆ, ಸಂಸದರು ಸೇರಿದಂತೆ ಇತ್ಯಾದಿಗಳ ವಿವೇಚನಾ ಕೋಟಾಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಶಿಕ್ಷಣ ಸಚಿವರಿಂದ ವಿದ್ಯಾರ್ಥಿಗಳಿಗೆ ಶಿಫಾರಸು ಮಾಡುವ ಅಭ್ಯಾಸ ಬಹಳ ಹಿಂದಿನಿಂದಲೂ ಇತ್ತು. ಆದರೆ, ಅದನ್ನು ನಿಲ್ಲಿಸಲಾಗಿದೆ ಎಂದು ಕೇಂದ್ರದ ಮೂಲಗಳು ತಿಳಿಸಿವೆ.
ಪ್ರತಿ ಸಂಸದರಿಂದ 10 ವಿದ್ಯಾರ್ಥಿಗಳ ಶಿಫಾರಸಿಗೆ ಅವಕಾಶವಿತ್ತು:ಪ್ರತಿ ಸಂಸದರಿಂದ 10 ವಿದ್ಯಾರ್ಥಿಗಳ ಹೆಸರನ್ನು ಶಿಫಾರಸು ಮಾಡಬಹುದಿತ್ತು. ಈ ಅವಕಾಶವನ್ನು ಇದೇ ವರ್ಷದಿಂದಲೇ ನಿಲ್ಲಿಸಲಾಗಿದೆ. ಇದರ ಜೊತೆಗೆ ಜಿಲ್ಲಾಧಿಕಾರಿ, ಶಿಕ್ಷಣ ಸಚಿವಾಲಯದ ನೌಕರರು, ಸಂಸದರ ಅವಲಂಬಿತ ಮಕ್ಕಳು ಮತ್ತು ಮೊಮ್ಮಕ್ಕಳು, ನಿವೃತ್ತ ಸಿಬ್ಬಂದಿ, ಕೇಂದ್ರೀಯ ವಿದ್ಯಾಲಯದ ನೌಕರರು, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರ ಕೋಟಾವನ್ನು ಕೂಡಾ ರದ್ದುಪಡಿಸಲಾಗಿದೆ. ಈ ಮೂಲಕ ದೇಶಾದ್ಯಂತದ ಸುಮಾರು 40,000 ಸೀಟುಗಳನ್ನು ಮುಕ್ತಗೊಳಿಸಲಿದೆ. ಆದರೆ, ಒಂಟಿ ಹೆಣ್ಣು ಮಕ್ಕಳು ಹಾಗೂ ಅನಾಥ ಮಕ್ಕಳು ಸೇರಿದಂತೆ ಕೆಲವು ವರ್ಗಗಳಿಗೆ ಕೋಟಾದಡಿ ಪ್ರವೇಶದ ನಿಬಂಧನೆ ಮುಂದುವರಿಯಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಒಂದೇ ಹೆಣ್ಣು ಮಗು ಹೊಂದಿರುವ ಮತ್ತು ಪಿಎಂ ಕೇರ್ಸ್ ಚಿಲ್ಡ್ರನ್ ಯೋಜನೆಯಡಿ ಕೋವಿಡ್‌ನಿಂದ ಅನಾಥರಾದವರಿಗೆ, ಕಾಶ್ಮೀರಿ ವಲಸಿಗರು, ಅರೆಸೈನಿಕ ಪಡೆಗಳು, ಗುಪ್ತಚರ ಸಂಸ್ಥೆಗಳು ಸೇರಿದಂತೆ ಇತ್ಯಾದಿಗಳ ವಾರ್ಡ್‌ಗಳಿಗೆ ಸಣ್ಣ ಸಂಖ್ಯೆಯ ವಿವೇಚನೆ ಕೋಟಾಗಳು ಮುಂದುವರೆಯಲಿವೆ. ಇದರ ಜೊತೆಗೆ ಕೆವಿಗಳ ಸೇವೆಯಲ್ಲಿರುವ ನೌಕರರ ಮಕ್ಕಳು, ಲಲಿತಕಲೆ, ಕ್ರೀಡೆಗಳಲ್ಲಿ ಸಾಧನೆಗೈದ ಪ್ರತಿಭಾನ್ವಿತ ಮಕ್ಕಳು, ಶೌರ್ಯ ಪ್ರಶಸ್ತಿಗಳನ್ನು ಪಡೆದವರು ಇತ್ಯಾದಿಗಳಲ್ಲಿಯೂ ಈ ಕೋಟಾ ಮುಂದುವರೆಯಲಿದೆ.