ನವದೆಹಲಿ: ಬಾಲಿವುಡ್ ನಟ ಮತ್ತು ಬಿಜೆಪಿ ಸಂಸದ ಸನ್ನಿ ಡಿಯೋಲ್ಗೆ ಜೀವ ಬೆದರಿಕೆಯಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಸನ್ನಿ ಡಿಯೋಲ್ಗೆ ವೈ- ಕೆಟಗರಿಯ ಭದ್ರತೆ ನೀಡಿದೆ.
ಗುರುದಾಸ್ಪುರದ ಸಂಸದರಾದ ಸನ್ನಿ ಡಿಯೋಲ್ಗೆ ವೈ-ಕೆಟಗರಿ ಭದ್ರತೆ ನೀಡಿರುವ ಕಾರಣದಿಂದ 11 ಮಂದಿ ಭದ್ರತಾ ಸಿಬ್ಬಂದಿ ಪಾಳಿಯ ಆಧಾರದಲ್ಲಿ ಡಿಯೋಲ್ ಅವರ ರಕ್ಷಣಾ ಕರ್ತವ್ಯ ನಿರ್ವಹಿಸಲಿದ್ದಾರೆ. ಇದರ ಜೊತೆಗೆ ವೈಯಕ್ತಿಕ ಭದ್ರತಾ ಅಧಿಕಾರಿಗಳು ಮತ್ತು ಓರ್ವ ಶಸ್ತ್ರ ಸಜ್ಜಿತ ಸಿಬ್ಬಂದಿಯನ್ನು ಕೂಡಾ ನೀಡಲಾಗುತ್ತದೆ. ರಾತ್ರಿ ವೇಳೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
ಇದನ್ನೂ ಓದಿ:ಬಂಗಾಳದ ವಿಚಾರದಲ್ಲಿ ಕೇಂದ್ರದ ಹಸ್ತಕ್ಷೇಪ: ಸಿಎಂ ಮಮತಾ ಗರಂ
ಸನ್ನಿ ಡಿಯೋಲ್ಗೆ ಈಗಾಗಲೇ ಪಂಜಾಬ್ ಸರ್ಕಾರವು ವೈ- ಕೆಟಗರಿಯ ಭದ್ರತೆಯನ್ನು ಒದಗಿಸಿದೆ. ಆದರೆ ನವದೆಹಲಿಯಲ್ಲಿ ರೈತ ಪ್ರತಿಭಟನೆ ಮತ್ತು ಗುರುದಾಸ್‌ಪುರದಲ್ಲಿ ಪಾಕಿಸ್ತಾನದ ಭಯೋತ್ಪಾದಕರ ಚಟುವಟಿಕೆಗಳು ನಡೆಯುತ್ತಿರುವ ಕಾರಣದಿಂದ ಸಚಿವರ ಹಂತದ ವೈ-ಕೆಟಗರಿ ಭದ್ರತೆಯನ್ನು ಒದಗಿಸಲಾಗಿದೆ.
ಇತ್ತೀಚೆಗೆ, ಸನ್ನಿ ಡಿಯೋಲ್ ನೂತನ ಕೃಷಿ ಸುಧಾರಣಾ ಕಾನೂನುಗಳ ಬಗ್ಗೆ ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವಾಗಲೂ ರೈತರ ಸುಧಾರಣೆಯ ಬಗ್ಗೆ ಯೋಚಿಸುತ್ತದೆ. ಹಾಗಾಗಿ ರೈತರು ಮತ್ತು ಪಕ್ಷದ ನಿಲುವಿನ ಪರವಾಗಿ ನಿಲ್ಲುತ್ತೇನೆ ಎಂದು ಸ್ಪಷ್ಟನೆ ನೀಡಿದ್ದರು.
ಈಗ ಪಶ್ಚಿಮ ಬಂಗಾಳದಲ್ಲೂ ಸುಮಾರು 25 ಪ್ರಮುಖ ವ್ಯಕ್ತಿಗಳಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಮೂಲಕ ವಿವಿಧ ವಿಭಾಗಗಳ ಅಡಿಯಲ್ಲಿ ರಕ್ಷಣೆಯನ್ನು ಒದಗಿಸಲಾಗಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.