ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಇದರ ಮಧ್ಯೆ ಇಂದು ನಡೆಯಬೇಕಾಗಿದ್ದ 10ನೇ ಸುತ್ತಿನ ಮಾತುಕತೆ ನಾಳೆಗೆ ಮುಂದೂಡಿಕೆಯಾಗಿದೆ.
ಕೃಷಿ ಸಂಘಟನೆಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ಈಗಾಗಲೇ ನಡೆದಿರುವ ಎಲ್ಲ ಸಭೆಗಳು ವಿಫಲಗೊಂಡಿರುವ ಕಾರಣ ಇಂದು 10ನೇ ಸುತ್ತಿನ ಮಾತುಕತೆಗೆ ದಿನ ನಿಗದಿ ಮಾಡಲಾಗಿತ್ತು. ಆದರೆ ಇದನ್ನ ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ಈ ಹಿಂದೆ ನಡೆದಿರುವ ಸಭೆಯಲ್ಲಿ ಕೃಷಿ ಕಾನೂನು ರದ್ಧುಗೊಳಿಸುವಂತೆ ವಿವಿಧ ರೈತ ಸಂಘಟನೆಗಳು ಪಟ್ಟು ಹಿಡಿದಿದ್ದು, ಇದಕ್ಕೆ ಕೇಂದ್ರ ಸರ್ಕಾರ ತಯಾರಿಲ್ಲ. ಇದೇ ಕಾರಣಕ್ಕೆ ರೈತ ಸಂಘಟನೆ ಹಾಗೂ ಕೇಂದ್ರದ ನಡುವೆ ಒಮ್ಮತದ ಅಭಿಪ್ರಾಯ ಮೂಡುತ್ತಿಲ್ಲ ಎಂದು ತಿಳಿದು ಬಂದಿದೆ.