ನವದೆಹಲಿ:ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370ನೇ ವಿಧಿ ರದ್ದು ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕೇಂದ್ರ ಸರ್ಕಾರ ವಿರೋಧಿಸಿದೆ. 2018 ರಿಂದ ಅಂದರೆ ವಿಧಿ ರದ್ದಾದ ಬಳಿಕ ಕಣಿವೆಯಲ್ಲಿ ಶಾಂತಿ ನೆಲೆಸಿದೆ. ಅಭಿವೃದ್ಧಿ ಕಾರ್ಯಗಳು ಚುರುಕು ಪಡೆದುಕೊಂಡಿವೆ. ಭಯೋತ್ಪಾದನೆ, ಕಲ್ಲು ತೂರಾಟ ಘಟನೆಗಳು ಇಲ್ಲವಾಗಿವೆ ಎಂದು ಸುಪ್ರೀಂಕೋರ್ಟ್ಗೆ ಸಲ್ಲಿಸಲಾದ ಅಫಿಡವಿಟ್ನಲ್ಲಿ ಹೇಳಿದೆ.
ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳ ಉಪಟಳಕ್ಕೆ ತುತ್ತಾಗಿದ್ದ ರಾಜ್ಯವನ್ನು(ಸದ್ಯ ಕೇಂದ್ರಾಡಳಿತ ಪ್ರದೇಶ) ಅಖಂಡ ಭಾರತದಲ್ಲಿ ಸೇರಿಸಲಾಗಿದೆ. ವಿಶೇಷ ಸ್ಥಾನಮಾನ ನೀಡಿದ್ದ 370 ವಿಧಿ ರದ್ದು ಮಾಡಿದ ಬಳಿಕ ಹಿಂಸಾಚಾರ ನಶಿಸಿದೆ ಎಂದು ಗೃಹ ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. 2018 ರಲ್ಲಿ 1767 ಕೇಸ್ಗಳಷ್ಟಿದ್ದ ಭಯೋತ್ಪಾದನೆ, ಪ್ರತ್ಯೇಕತಾವಾದಿ ಸಂಘಟನೆಗಳ ಕಲ್ಲು ತೂರಾಟದ ಘಟನೆಗಳು 2023 ರಲ್ಲಿ ಶೂನ್ಯಕ್ಕೆ ಇಳಿದಿವೆ. 2018 ರಲ್ಲಿ 52 ಸಂಘಟಿತ ಬಂದ್, ಹರತಾಳುಗಳು ಈಗ ಒಂದೂ ಇಲ್ಲ. ಭಯೋತ್ಪಾದಕ ಚಟುವಟಿಕೆಗಳನ್ನು ಬುಡಸಮೇತ ಕಿತ್ತು ಹಾಕಲಾಗಿದೆ. 2018 ರಲ್ಲಿ 199 ಕೇಸ್ಗಳಿದ್ದವು. ಈಗ 12 ಕ್ಕೆ ಇಳಿದಿದೆ ಎಂದು ಕೇಂದ್ರ ಹೇಳಿದೆ.
ಒಳನುಸುಳುವಿಕೆ, ಟೆರರಿಸಂಗೆ ತಿಲಾಂಜಲಿ:ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಂಡಿದ್ದಾಗಿ ಕೇಂದ್ರ ಒತ್ತಿಹೇಳಿದೆ. ಸಾಂವಿಧಾನಿಕ ಬದಲಾವಣೆಗಳ ನಂತರ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ. ಭಯೋತ್ಪಾದಕನೆ ಪ್ರಕರಣಗಳು 2018 ರಲ್ಲಿ 228 ಇದ್ದವು. 2022 ರಲ್ಲಿ 125 ಕ್ಕೆ ಇಳಿದಿದೆ. ಉಗ್ರರ ಒಳನುಸುಳುವಿಕೆ ಶೇಕಡಾ 90.2 ರಷ್ಟು ಕಡಿಮೆಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಘಟನೆಗಳು 97.2 ಪ್ರತಿಶತ ತಗ್ಗಿಸಲಾಗಿದೆ. ಭದ್ರತಾ ಪಡೆಗಳ ಸಾವು - ನೋವುಗಳು 2018 ರಲ್ಲಿ 91 ರಿಂದ 2022 ರಲ್ಲಿ 31 ಕ್ಕೆ ಕುಸಿದಿದೆ. ಈಗ ಕಣಿವೆ ಶಾಂತವಾಗಿದೆ ಎಂದು ಹೇಳಿದೆ.