ನವದೆಹಲಿ:ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು ಹಾಗೂ ಕೇಂದ್ರ ಸರ್ಕಾರದ ನಡುವೆ ಇಂದು ಮಾತುಕತೆ ನಡೆಯಲಿದೆ.
ಇಂದಿನ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, "ಸಮಸ್ಯೆಗಳನ್ನು ಎಷ್ಟರ ಮಟ್ಟಿಗೆ ಪರಿಹರಿಸಬಹುದೆಂದು ನೋಡೋಣ. ನೂತನ ಕಾನೂನುಗಳು ರೈತರ ಹಿತಾಸಕ್ತಿಯನ್ನು ಹೊಂದಿವೆ ಮತ್ತು ತುಂಬಾ ಸಮಯದ ನಂತರ ಸುಧಾರಣೆ ತರಲಾಗಿದೆ ಎಂದು ರೈತರಿಗೆ ಮನವಿ ಮಾಡುತ್ತೇನೆ. ಆದರೆ ಇದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದರೆ ನಾವು ಅವರ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧರಿದ್ದೇವೆ" ಎಂದಿದ್ದರು.
ರೈತರ ನಿಯೋಗವು ಕೃಷಿ ಸಚಿವರನ್ನು ಭೇಟಿ ಮಾಡಲಿದೆ. ಸರ್ಕಾರ ಬಯಸಿದರೆ ಸಮಸ್ಯೆಗಳನ್ನು ಪರಿಹರಿಸಬಹುದು. ಇಲ್ಲವೇ ದೇಶಾದ್ಯಂತದ ಎಲ್ಲಾ ರೈತ ಸಂಘಟನೆಗಳು ಬೀದಿಗಿಳಿಯಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕೈಟ್ ಹೇಳಿದ್ದಾರೆ.
ಹೊಸ ಕೃಷಿ ಕಾನೂನುಗಳನ್ನು ಸುಧಾರಿಸಲು ಕೇಂದ್ರಕ್ಕೆ ಇದು ಕೊನೆಯ ಅವಕಾಶ ಎಂದು ರೈತರು ಎಚ್ಚರಿಸಿರುವ ಕಾರಣ ಪ್ರತಿಭಟನಾ ನಿರತ ರೈತರೊಂದಿಗಿನ ಈ ಸಭೆ ನಿರ್ಣಾಯಕವಾಗಿರುತ್ತದೆ.
ಹೊಸ ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಸಹಾಯ ಮಾಡುವ ವಿಶೇಷ ಸಮಿತಿಯನ್ನು ರಚಿಸುವ ಕೇಂದ್ರದ ಪ್ರಸ್ತಾವನೆಯನ್ನು ರೈತರು ತಿರಸ್ಕರಿಸಿದ್ದರಿಂದ ಡಿಸೆಂಬರ್ 1 ರಂದು ನಡೆದ ಸಭೆ ವಿಫಲವಾಗಿತ್ತು.