ಕೋಲ್ಕತಾ: ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮುಂದುವರೆಸಿದ ಮಮತಾ ಬ್ಯಾನರ್ಜಿ, ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ರಾಜ್ಯ ಸರ್ಕಾರದ ಕಾರ್ಯಚಟುವಟಿಕೆಯಲ್ಲಿ ಕೇಂದ್ರವು ನಿರ್ಭಯವಾಗಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
"ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ರಾಜ್ಯ ಸರ್ಕಾರದ ಕಾರ್ಯಚಟುವಟಿಕೆಯಲ್ಲಿ ಕೇಂದ್ರವು ಹಸ್ತಕ್ಷೇಪ ಮಾಡುತ್ತಿದೆ. ಬಂಗಾಳದ ಜನರಿಗೆ ಬೆಂಬಲ ತೋರಿದ ಮತ್ತು ಸಂಯುಕ್ತ ವ್ಯವಸ್ಥೆಯ ಮೇಲಿನ ಅವರ ಬದ್ಧತೆಯನ್ನು ಪುನರುಚ್ಚರಿಸಿದ್ದಕ್ಕಾಗಿ ಭೂಪೇಶ್ ಬಾಗೆಲ್, ಅರವಿಂದ್ ಕೇಜ್ರಿವಾಲ್, ಕ್ಯಾಪ್ಟನ್ ಅಮರಿಂದರ್ ಸಿಂಗ್, ಅಶೋಕ್ ಗೆಹ್ಲೋಟ್ ಮತ್ತು ಎಂ.ಕೆ. ಸ್ಟಾಲಿನ್ ಅವರಿಗೆ ನನ್ನ ಕೃತಜ್ಞತೆಗಳು" ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಈಗಾಗಲೇ 2021ರ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೋಲ್ಪುರದಲ್ಲಿ ರೋಡ್ ಶೋ ನಡೆಸಿದ ನಂತರ ದೀದಿ ಈ ಟ್ವೀಟ್ ಮಾಡಿದ್ದಾರೆ. ರೋಡ್ ಶೋ ವೇಳೆ ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಬಂಗಾಳದ ಜನರು 'ಬದಲಾವಣೆ' ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.